ಸಮಗ್ರ ನ್ಯೂಸ್: ಕಾಡಾನೆ ದಾಳಿಗೆ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಶಾಸಕರ ಮೇಲೆ ಹಲ್ಲೆ ನಡೆದ ಸಂಬಂಧ ಪೊಲೀಸರು ಹುಲ್ಲೆಮನೆ ಕುಂದೂರು ಗ್ರಾಮದ ಹತ್ತು ಜನರನ್ನು ಬಂಧಿಸಿದ್ದಾರೆ.
ಸೋಮವಾರ ಮುಂಜಾನೆ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರು ಗ್ರಾಮಕ್ಕೆ ಹೋದ ಪೊಲೀಸರು ಹತ್ತು ಜನರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಏನಿದು ಘಟನೆ?
ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ರವಿವಾರ ಬೆಳಗ್ಗೆ ಹುಲ್ಲು ಕತ್ತರಿಸಲು ಹೋದ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿತ್ತು. ದಾಳಿಯಲ್ಲಿ ಗ್ರಾಮದ ಶೋಭಾ ಸಾವನ್ನಪ್ಪಿದ್ದರು. ಕಾಡಾನೆ ಹಿಡಿಯಬೇಕು ಎಂದು ಆಗ್ರಹಿಸಿ ನಿನ್ನೆ ಇಡೀ ದಿನ ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಮಾತಿನ ಚಕಮಕಿ ನಡೆದು ಪ್ರತಿಭಟನಕಾರರ ಮೇಲೆ ಲಾಠಿಚಾರ್ಜ್ ಕೂಡಾ ನಡೆಸಲಾಗಿತ್ತು. ಗಲಭೆಯ ನಡುವಿನಿಂದ ಪೊಲೀಸರು ಶಾಸಕ ಕುಮಾರಸ್ವಾಮಿಯನ್ನು ಸುರಕ್ಷಿತವಾಗಿ ಕರೆ ತಂದಿದ್ದರು. ಆದರೆ ಆ ಬಳಿಕ ಹರಿದ ಬಟ್ಟೆಯನ್ನು ತೋರಿಸಿ ಜನರು ಹಲ್ಲೆ ಮಾಡಿದ್ದರು ಎಂದು ಶಾಸಕರು ಆರೋಪಿಸಿದ್ದರು.
ಸದ್ಯ ಪೊಲೀಸರು ಗ್ರಾಮದ ಹಲವರನ್ನು ಬಂಧಿಸಿದ್ದಾರೆ. ಅತ್ತ ಆನೆ ದಾಳಿಗೆ ಬಲಿಯಾದ ಶೋಭಾ ಅಂತ್ಯಸಂಸ್ಕಾರ ಇನ್ನೂ ನೆರವೇರಿಲ್ಲ. ಲಾಠಿಚಾರ್ಜ್, ಬಂಧನ ವಿರೋಧಿಸಿ ಇಂದು ಮತ್ತೆ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ.