ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಉಗ್ರರು ಬಾಂಬ್ ಸ್ಪೋಟಿಸಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದು, ಬೆಳಕಿಗೆ ಬಂದಿರುವ ಹಿನ್ನೆಲೆ ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಸಂಬಂಧ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸಿಎಂ, ರಾಜ್ಯದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ತತ್‍ಕ್ಷಣವೇ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದ್ದಾರೆ.
ರಾಜಧಾನಿ ಬೆಂಗಳೂರು, ಮಂಗಳೂರು, ಉಡುಪಿ, ಕಾರವಾರ, ಮಡಿಕೇರಿ, ಶಿವಮೊಗ್ಗ, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಮತ್ತಿತರ ಕಡೆ ಹೈ ಅಲರ್ಟ್ ಘೋಷಣೆ ಮಾಡಬೇಕೆಂದು ಪ್ರವೀಣ್ ಸೂದ್ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‍ಕುಮಾರ್, ಗುಪ್ತಚರ ವಿಭಾಗ, ಆಂತರಿಕ ಭದ್ರತಾ ವಿಭಾಗ ಸೇರಿದಂತೆ ಮತ್ತಿತರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಬಂದರು, ಕಾರವಾರ ಬಂದರು, ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಮೈಸೂರು ಅರಮನೆ, ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಧರ್ಮಸ್ಥಳ, ಇಸ್ಕಾನ್, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಪ್ರತಿಷ್ಠಿತ ಕಡೆ ಭದ್ರತೆಯನ್ನು ಒದಗಿಸಬೇಕು. ಯಾವುದೇ ರೀತಿಯ ಲೋಪದೋಷಗಳು ಉಂಟಾದರೆ ಪೊಲೀಸರನ್ನೇ ಹೊಣೆಗಾರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಎಲ್ಲ ವಲಯ ಐಜಿಪಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಬಿಗಿ ಕ್ರಮ ತೆಗೆದುಕೊಳ್ಳಬೇಕು, ಅನುಮಾನಸ್ಪದವಾಗಿ ತಿರುಗಾಡುವ ಯಾವುದೇ ವ್ಯಕ್ತಿಯನ್ನು ತಕ್ಷಣವೇ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು, ಚುನಾವಣಾ ವರ್ಷ ಆಗಿರುವುದರಿಂದ ಕೆಲವರು ಪರಿಸ್ಥಿತಿಯನ್ನು ದುರ್ಲಭ ಪಡೆಯಲು ಯತ್ನಿಸುತ್ತಾರೆ ಇದಕ್ಕೆ ಅವಕಾಶ ಕೊಡದೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಬೊಮ್ಮಾಯಿ ಪ್ರವೀಣ್‍ಸೂದ್‍ಗೆ ಸೂಚಿಸಿದ್ದಾರೆ.