ಸಮಗ್ರ ನ್ಯೂಸ್: ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕರಾವಳಿಯಲ್ಲಿ ಕಿಕ್ ಏರಿಸುತ್ತಿದ್ದ ಗಾಂಜಾ ದಂಧೆಕೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ 32 ಲಕ್ಷ ರೂ. ಮೌಲ್ಯದ 132 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
17 ರಂದು ಮಂಗಳೂರು ನಗರಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಮಹೇಂದ್ರ XUV 500 ಕಾರ್ ನಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಬಂಟ್ವಾಳ ತಾಲೂಕು ನರಿಂಗಾನ ಗ್ರಾಮ ತೌಡುಗೋಳಿ ಕ್ರಾಸ್ ನಿವಾಸಿ ರಮೀಝ್ ರಾಝ್(30), ಕೇರಳದ ಕಾಸರಗೋಡು ಜಿಲ್ಲೆ ಮಂಜೇಶ್ವರ ಮೀಯಪದವು ಮದಂಗಲ್ ಕಟ್ಟ ನಿವಾಸಿ ಅಬ್ದುಲ್ ಖಾದರ್ ಹ್ಯಾರಿಸ್(31) ಬಂಧಿತರು.
ಮುಡಿಪು ಕುರ್ನಾಡು ಗ್ರಾಮದ ಕಾಯರ್ ಗೋಳಿ ಎಂಬಲ್ಲಿ ಪತ್ತೆ ಹಚ್ಚಿ ಆರೋಪಿಗಳ ವಶದಲ್ಲಿದ್ದ ಬಿಳಿ ಬಣ್ಣದ ಮಹೇಂದ್ರ XUV 500 ಕಾರ್ ಸ್ವಾಧೀನಪಡಿಸಿಕೊಂಡು ಅದರಲ್ಲಿ ಸಾಗಾಟ ಮಾಡುತ್ತಿದ್ದ 132 ಕೆಜಿ ಗಾಂಜಾವನ್ನು, 2 ಮೊಬೈಲ್ ಫೋನ್ ಗಳನ್ನು, 3 ತಲವಾರು, 2180 ರೂ. ನಗದು ವಶಕ್ಕೆ ಪಡೆಯಲಾಗಿದೆ.
ವಶಪಡಿಸಿಕೊಂಡ ಗಾಂಜಾ, ಮಹೇಂದ್ರ XUV 500 ಕಾರು, ಮೊಬೈಲ್ ಫೋನ್ ಗಳ ಒಟ್ಟು ಮೌಲ್ಯ 39,15,000 ರೂ. ಆಗಿರುತ್ತದೆ. ಆರೋಪಿಗಳು ಗಾಂಜಾ ಸಾಗಾಟದ ಸಮಯದಲ್ಲಿ ಪೊಲೀಸರು ಅಥವಾ ಸಾರ್ವಜನಿಕರು ನಿಲ್ಲಿಸಿದ್ದಲ್ಲಿ, ಅವರಿಗೆ ತೊಂದರೆ ನೀಡುವ ಉದ್ದೇಶದಿಂದ ತಲವಾರುಗಳನ್ನು ಕಾರ್ ನಲ್ಲಿ ಇರಿಸಿದ್ದರು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳ ಪೈಕಿ ರಮೀಝ್ ರಾಝ್ ಎಂಬಾತನ ವಿರುದ್ಧ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಸೇವನೆಗೆ ಸಂಬಂಧಪಟ್ಟಂತೆ ಒಂದು ಪ್ರಕರಣ, ಗಾಂಜಾ ಮಾರಾಟ ಮಾಡಿದ ಪ್ರಕರಣ, ಹಲ್ಲೆ ಪ್ರಕರಣ, ಹೀಗೆ ಒಟ್ಟು 3 ಪ್ರಕರಣ ದಾಖಲಾಗಿರುತ್ತದೆ. ಅಲ್ಲದೇ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ ಒಂದು ಪ್ರಕರಣ ಹಾಗೂ ಕೊಲೆ ಯತ್ನ ಪ್ರಕರಣ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟದ ಒಂದು ಪ್ರಕರಣ ಹೀಗೆ ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತದೆ.
ಇನ್ನೋರ್ವ ಆರೋಪಿ ಅಬ್ದುಲ್ ಖಾದರ್ ಹ್ಯಾರಿಸ್ ಎಂಬಾತನ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2 ಕೊಲೆ ಯತ್ನ ಪ್ರಕರಣ ಹಾಗೂ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಈ ಬೃಹತ್ ಗಾಂಜಾ ಮಾರಾಟ/ಸಾಗಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಪಿಎಸ್‌ಐ ರಾಜೇಂದ್ರ ಬಿ, ಎಎಸ್‌ಐಗಳಾದ ಶಶಿಧರ ಶೆಟ್ಟಿ, ಮೋಹನ್ ಕೆ ವಿ., ಹರೀಶ ಪಿ. ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.