ಸಮಗ್ರ ನ್ಯೂಸ್: ಹಿಂದೂ ಧರ್ಮ ಅಲ್ಲ, ಇದು ಜೀವನ ಶೈಲಿಯಾಗಿದೆ. ವೈದಿಕ ಧರ್ಮಕ್ಕೆ ಈಗ ಹಿಂದೂ ಧರ್ಮ ಎಂದು ಕರೆಲಾಗುತ್ತಿದೆ.
ವೈದಿಕ ಧರ್ಮವನ್ನು ಹಿಂದೂ ಧರ್ಮ ಎಂದು ಕರೆದಾಗ, ಲಿಂಗಾಯತರು ಹಿಂದೂಗಳು ಆಗಲ್ಲ. ಲಿಂಗಾಯತ ಧರ್ಮ ಅವೈದಿಕ ಧರ್ಮ, ವೇಗ, ಆಗಮನ, ಪುರಾಣವನ್ನು ವಿರೋಧಿಸಿದ ಧರ್ಮ. ದೇಶದಲ್ಲಿ ಜೈನ, ಬೌದ್ಧ, ಕ್ರೈಸ್ತರಂತೆ ಲಿಂಗಾಯತ ಸಹ ಒಂದು ಪ್ರತ್ಯೇಕ ಧರ್ಮ. ಹಿಂದೂಗಳ ಆಚರಣೆ ಹಾಗೂ ಲಿಂಗಾಯತರ ಆಚರಣೆಗೆ ವ್ಯತ್ಯಾಸ ಇದೆ ಎಂದು ಬೆಳಗಾವಿಯಲ್ಲಿ ಗದಗಿ ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ.
ಹಿಂದೂಗಳು ದೇವಸ್ಥಾನದಲ್ಲಿ ದೇವರನ್ನು ಪೂಜಿಸುತ್ತಾರೆ. ಲಿಂಗಾಯತರು ಎದೆ ಮೇಲಿನ ಲಿಂಗವನ್ನು ಪೂಜೆ ಮಾಡುತ್ತಾರೆ. ಹಿಂದೂಗಳು ಮೃತಪಟ್ಟ ಸಂದರ್ಭದಲ್ಲಿ ದಹನ ಮಾಡುತ್ತಾರೆ. ಲಿಂಗಾಯತರು ಮಣ್ಣಲ್ಲಿ ಹೂಳುವ ಪದ್ಧತಿ ಅನುಸರಿಸುತ್ತಾರೆ. ಆಚಾರ ವಿಚಾರಗಳು ಭಿನ್ನ ಆಗಿರುವ ಕಾರಣ ಲಿಂಗಾಯತ ಎನ್ನುವುದು ಪ್ರತ್ಯೇಕ ಧರ್ಮ.
ಬ್ರಿಟಿಷರು ಸಹ ಲಿಂಗಾಯತ ಎನ್ನುವುದು ಧರ್ಮ ಎಂದೇ ಪ್ರಯೋಗ ಮಾಡಿದ್ದಾರೆ. ದೇಶದಲ್ಲಿ ಇರೋ ಎಲ್ಲಾ ಧರ್ಮೀಯರು ಭಾರತೀಯರೇ, ಧರ್ಮ ಎನ್ನುವ ಸೀಮಿತ ಅರ್ಥ ಬಳಸಬೇಕಾದರೆ ಲಿಂಗಾಯತರು ಹಿಂದೂಗಳು ಅಲ್ಲ. ಪ್ರಾದೇಶಿಕವಾಗಿ ಜೈನರು, ಬೌದ್ಧರು, ಸಿಖ್, ಲಿಂಗಾಯತರು ಎಲ್ಲರೂ ಹಿಂದೂಗಳೆ. ಆಚಾರ ವಿಚಾರ ಪ್ರತ್ಯೇಕವಾಗಿದ್ದರಿಂದ ಧಾರ್ಮಿಕವಾಗಿ ಎಲ್ಲರೂ ಪ್ರತ್ಯೇಕವಾಗಿದ್ದಾರೆ ಎಂದರು.