ಸಮಗ್ರ ನ್ಯೂಸ್: ನದಿ ನೀರಿನ ಹರಿವು ದಿಢೀರ್ ಏರಿಕೆಯಾಗಿ ಸೇತುವೆ ನಿರ್ಮಾಣ ಕಾಮಗಾರಿನಿರತ ಲಾರಿಯೊಂದಿ ಹೊಳೆ ಮಧ್ಯದಲ್ಲಿ ಬಾಕಿಯಾದ ಘಟನೆ ಪಾಣೆಮಂಗಳೂರಿನ ನೇತ್ರಾವತಿ ನದಿಯಲ್ಲಿ ಮಂಗಳವಾರ ನಡೆದಿದೆ.
ಮಳೆಯ ಹಿನ್ನಲೆಯಲ್ಲಿ ಸೇತುವೆಯ ಬಾಕಿಯುಳಿದ ಪಿಲ್ಲರ್ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿ ಇದೀಗ ಮತ್ತೆ ಕಾಮಗಾರಿ ಆರಂಭಿಸಲಾಗಿತ್ತು. ಹೀಗಾಗಿ ಮಂಗಳವಾರ ನದಿಗೆ ಮಣ್ಣು ಹಾಕಿ ಲಾರಿ ನದಿಯಿಂದ ಹಿಂತಿರುಗುತ್ತಿದ್ದ ವೇಳೆ ಏಕಾಏಕಿ ನದಿ ನೀರು ಹೆಚ್ಚಳವಾಗಿದೆ. ಅಲ್ಲದೆ ಒಂದು ಭಾಗದ ಮಣ್ಣು ಕೂಡಾ ಕೊಚ್ಚಿ ಹೋಗಿದೆ. ಇದರಿಂದ ದಡಕ್ಕೆ ಬರಲಾಗದೆ ಲಾರಿ ನೀರಿನ ಮಧ್ಯದಲ್ಲೇ ಬಾಕಿಯಾಗಿತ್ತು.
ಲಾರಿ ನದಿ ಮಧ್ಯದಲ್ಲಿ ಬಾಕಿಯಾದ್ದರಿಂದ ಕೂಡಲೇ ಸ್ಥಳಕ್ಕೆ ಜೆಸಿಬಿ ತರಿಸಲಾಯಿತು. ಜೆಸಿಬಿಯ ಸಹಾಯದಿಂದ ಲಾರಿಯನ್ನು ಬದಿಗೆ ಸರಿಸುವ ಕೆಲಸ ನಡೆಯಿತು. ಅಣೆಕಟ್ಟುಗಳಲ್ಲಿ ನೀರಿನ ವ್ಯತ್ಯಾಸದಿಂದಾಗಿ ಈ ರೀತಿ ನದಿ ನೀರಿನ ಮಟ್ಟ ದಿಡೀರ್ ಏರಿಕೆಯಾಗುತ್ತದೆ ಎನ್ನಲಾಗುತ್ತಿದೆ.