ಸಮಗ್ರ ನ್ಯೂಸ್: ಭೂಮಿಯ ಖಾತೆಯಲ್ಲಿ ತಪ್ಪಾಗಿರುವ ಹೆಸರು ಸರಿ ಮಾಡಿಕೊಡಲು 10 ಲಕ್ಷ ರೂ.ಗೆ ಬೇಡಿಕೆ ಒಡ್ಡಿದ್ದ ವಿಶೇಷ ತಹಸೀಲ್ದಾರ್ ಮತ್ತು ಏಜೆಂಟ್ ಲೋಕಾಯುಕ್ತ ಬಲೆಗೆ ಸೆರೆಸಿಕ್ಕಿದ್ದಾರೆ. ಬೆಂಗಳೂರು ನಗರ ಉತ್ತರ ತಾಲೂಕು ವಿಶೇಷ ತಹಶೀಲ್ದಾರ್ ವರ್ಷಾ ಒಡೆಯರ್ ಮತ್ತು ಏಜೆಂಟ್ ರಮೇಶ್ ಲೋಕಾಯಕ್ತ ಬಲೆಗೆ ಸಿಲುಕಿದ ಆರೋಪಿಗಳು.
ಸದ್ಯ ಆರೋಪಿಗಳ ವಿರುದ್ಧ ಎಐಆರ್ ದಾಖಲಿಸಿ ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಕೆಂಗನಹಳ್ಳಿಯ ಕಾಂತರಾಜು, ತನಗೆ ಸೇರಿದ ಜಮೀನಿನ ಖಾತೆಯಲ್ಲಿ ಹೆಸರು ಬದಲಾಗಿದೆ. ಅದರನ್ನು ಸರಿ ಮಾಡಿಕೊಡುವಂತೆ ವಿಶೇಷ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕೈಗೆತ್ತಿಕೊಂಡ ವರ್ಷಾ ಒಡೆಯರ್, ಹೆಸರು ಸರಿ ಮಾಡಿಕೊಡಲು 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಒಡ್ಡಿದ್ದರು. ನೊಂದ ಅರ್ಜಿದಾರ ಕಾಂತರಾಜು, ಈ ಕುರಿತು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ಇದರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡ ಲೋಕಾಯುಕ್ತ ಪೊಲೀಸರು, ಮಂಗಳವಾರ ಸಂಜೆ 5 ಗಂಟೆ ಸಮಯದಲ್ಲಿ ಉತ್ತರ ತಾಲೂಕು ವಿಶೇಷ ತಹಸೀಲ್ದಾರ್ ಕಚೇರಿಯಲ್ಲಿ ಕಾಂತರಾಜು ಕಡೆಯಿಂದ ಮುಂಗಡವಾಗಿ 5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿದ್ದಾರೆ.
ಇದೇ ವೇಳೆ ಹಣ ಸ್ವೀಕರಿಸುತ್ತಿದ್ದ ಮಧ್ಯವರ್ತಿ ರಮೇಶ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2014ನೇ ಕೆಪಿಎಸ್‌ಸಿ ನಡೆಸಿದ ಕರ್ನಾಟಕ ಆಡಳಿತ ಸೇವೆಯಲ್ಲಿ ಆಯ್ಕೆಯಾಗಿದ್ದ ವರ್ಷಾ ಒಡೆಯರ್, ಚಾಮರಾಜನಗರ ಮತ್ತು ಕನಕಪುರದಲ್ಲಿ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು. ಇದಾದ ಮೇಲೆ ಬೆಂಗಳೂರು ಉತ್ತರ ತಾಲೂಕು ವಿಶೇಷ ತಹಸೀಲ್ದಾರ್ ಹುದ್ದೆಗೆ ವರ್ಗಾವಣೆಗೊಂಡಿದ್ದರು. ಇದೀಗ ಲಂಚಕ್ಕೆ ಕೈಚಾಚಿ ಜೈಲಿಗೆ ಸೇರಿದ್ದಾರೆ.