ಸಮಗ್ರ ನ್ಯೂಸ್: ಶಬರಿಮಲೆಯ ಅಯ್ಯಪ್ಪ ದೇಗುಲವು ಬುಧವಾರದಿಂದ (ನ 16) ತೆರೆಯಲಿದ್ದು, ಗುರುವಾರದಿಂದ (ನ 17) ಎರಡು ತಿಂಗಳ ಅವಧಿಗೆ ಭಕ್ತರ ದರ್ಶನಕ್ಕೆ ಅವಕಾಶ ಇರಲಿದೆ.
ವಾರ್ಷಿಕ ಮಂಡಲಂ-ಮಕರವಿಳುಕ್ಕು ಯಾತ್ರೆಗೂ ನಾಳೆಯಿಂದಲೇ ಚಾಲನೆ ಸಿಗಲಿದೆ. ದೇಗುಲದ ಹಾಲಿ ಪ್ರಧಾನ ಅರ್ಚಕರಾದ ಕಂಡರಾರು ರಾಜೀವರು ಮತ್ತು ಹಿಂದ ಪ್ರಧಾನ ಅರ್ಚಕರಾದ ಎನ್.ಪರಮೇಶ್ವರನ್ ನಂಬೂದಿರಿ ಅವರ ಸಮಕ್ಷಮದಲ್ಲಿ ದೇಗುಲದ ಗರ್ಭಗೃಹವನ್ನು ಇಂದು ಸಂಜೆ 5 ಗಂಟೆಗೆ ತೆರೆಯಲಾಗುವುದು. ನಂತರ ಅಯ್ಯಪ್ಪ ಮತ್ತು ಮಲಿಕಾಪುರಮ್ ದೇಗುಲಗಳ ಮುಖ್ಯ ಅರ್ಚಕರು ಪೂಜಾ ವಿಧಿಗಳನ್ನು ಆರಂಭಿಸುವ ಮೂಲಕ ಜವಾಬ್ದಾರಿಯನ್ನು ಸ್ವೀಕರಿಸಲಿದ್ದಾರೆ. 41 ದಿನಗಳ ಮಂಡಲ ಪೂಜಾ ವಿಧಿಗಳು ಡಿ 27ಕ್ಕೆ ಮುಕ್ತಾಯವಾಗಲಿದೆ.
ನಂತರ ಮೂರು ದಿನಗಳ ಕಾಲ ದೇಗುಲದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಡಿ 30ರಿಂದ ಮಕರವಿಳುಕ್ಕು ಯಾತ್ರೆಗಾಗಿ ದೇಗುಲವನ್ನು ಮತ್ತೆ ತೆರೆಯಲಾಗುವುದು. ಜನವರಿ 14ರಂದು ಮಕರವಿಳಕ್ಕು ಕಾರ್ಯಕ್ರಮವಿದೆ. ಸಂಕ್ರಾಂತಿ ಜ್ಯೋತಿಯ ದರ್ಶನ ಮತ್ತಿತರರ ಪೂಜಾ ವಿಧಿಗಳ ನಂತರ ಜನವರಿ 20ರಂದು ದೇಗುಲವನ್ನು ಮುಚ್ಚಲಾಗುವುದು. ಅಲ್ಲಿಗೆ ಈ ವರ್ಷದ ಶಬರಿಮಲೆ ಯಾತ್ರೆ ಋತುಮಾನ ಮುಕ್ತಾಯವಾದಂತೆ ಆಗುತ್ತದೆ.
ಕೋವಿಡ್-19ರ ನಿರ್ಬಂಧದ ಕಾರಣ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿತ್ತು. ಈ ಬಾರಿ ನಿರ್ಬಂಧ ಸಡಿಲಿಸಿರುವುದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳಬಹುದು ಎಂಬ ನಿರೀಕ್ಷೆಯಿದೆ. ಶಬರಿಮಲೆ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ಸುಮಾರು 13,000 ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಈ ವರ್ಷ ಯಾತ್ರಿಗಳಿಗೆ ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಮಾತ್ರವೇ ಪ್ರವೇಶ ಇರಲಿದೆ. ಒಂದು ದಿನಕ್ಕೆ ಗರಿಷ್ಠ 1.2 ಲಕ್ಷ ಮಂದಿಗೆ ದರ್ಶನ ಸಿಗಲಿದೆ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ.