ಸಮಗ್ರ ನ್ಯೂಸ್: ರಾತ್ರೋರಾತ್ರಿ ಮೈಸೂರು ನಗರದಲ್ಲಿ ಗುಂಬಜ್ ಮಾದರಿಯ ಬಸ್ ತಂಗುದಾಣದ ಮೇಲೆ ಕಳಶಗಳು ಬಂದಿದ್ದವು. ಈಗ ಏಕಾಏಕಿ ಸುತ್ತೂರು ಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಅವರ ಫೋಟೊ ಅಳವಡಿಸಿರುವುದು ಕಂಡುಬಂದಿದ್ದು, ಬಸ್ ತಂಗುದಾಣ ವಿವಾದ ನಾಟಕೀಯ ತಿರುವು ಪಡೆದಿದೆ.
ತಂಗುದಾಣವೊಂದಕ್ಕೆ ಮಂಗಳವಾರ ಜೆಎಸ್‌ಎಸ್ ಕಾಲೇಜು ಬಸ್ ನಿಲ್ದಾಣ ಎಂಬ ಬೋರ್ಡ್ ಅಳವಡಿಕೆ ಮಾಡಿದ್ದು, ಪಕ್ಷ, ಜಾತಿ ಮುಂದೆ ಬಿಟ್ಟು ಪೇಚಿಗೆ ಸಿಲುಕಿಸುವ ಯತ್ನ ನಡೆಸಲಾಗಿದೆ. ಸುತ್ತೂರು ಶ್ರೀ ವೀರಸಿಂಹಾಸನ ಮಠದ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿ ಸ್ವಾಮೀಜಿ, ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಫೋಟೊಗಳ ಜತೆಗೆ, ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಫೋಟೊಗಳು ಬ್ಯಾನರ್‌ನಲ್ಲಿವೆ. ಈಗ ಬಸ್ ನಿಲ್ದಾಣ ಒಡೆದರೆ ಸುತ್ತೂರು ಶ್ರೀಗಳಿಗೆ ಅಪಮಾನ ಮಾಡಿದಂತೆ ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ವಿವಾದಿತ ಬಸ್ ತಂಗುದಾಣದ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ನಗರದಲ್ಲಿ ನಿರ್ಮಿಸಲಾಗಿರುವ ಗುಂಬಜ್ ಮಾದರಿಯ ಬಸ್ ನಿಲ್ದಾಣಗಳಿಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಗುಂಬಜ್ ಮಾದರಿ ಬಸ್ ಶೆಲ್ಟರ್‌ಗಳನ್ನು ತೆರವು ಮಾಡಬೇಕು, ಇಲ್ಲವಾದರೆ ಒಡೆದು ಹಾಕುವುದಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದರು. ಬಳಿಕ ಶಾಸಕ ಎಸ್.ಎ ರಾಮದಾಸ್ ಕ್ಷೇತ್ರ ವ್ಯಾಪ್ತಿಯಲ್ಲಿ ರಾತ್ರೋರಾತ್ರಿ ಬಸ್ ತಂಗುದಾಣದ ಮೇಲೆ ರಚಿಸಲಾಗಿದ್ದ ಗುಂಬಜ್ ಆಕೃತಿಗಳ ಮೇಲೆ ಕಳಶ ಪ್ರತಿಷ್ಠಾಪನೆಯಾಗಿತ್ತು. ತಂಗುದಾಣ ಧ್ವಂಸ ಮಾಡುವುದಾಗಿ ಸಂಸದರು ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಬ್ಯಾನರ್ ಅಳವಡಿಕೆ ಮಾಡಿರುವುದು ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.