ಸಮಗ್ರ ನ್ಯೂಸ್: ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸಿ ಪ್ರಯಾಣಿಕರೊಬ್ಬರ ಲಕ್ಷಾಂತರ ರೂ. ಮೌಲ್ಯದ ಒಡವೆ, ಹಣ ದೋಚಿ ಪರಾರಿಯಾಗಿದ್ದ ಕಳ್ಳರು ನಾಲ್ಕು ತಿಂಗಳ ಬಳಿಕ ಅದೇ ಬಸ್‌ನಲ್ಲಿ ಸಂಚರಿಸಿದ ವೇಳೆ ಬಸ್ ನಿರ್ವಾಹಕರು ಮುಖಚಹರೆ ಮೂಲಕವೇ ಗುರುತು ಹಿಡಿದು ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಿರ್ವಾಹಕನ ಕಾರ್ಯಕ್ಷಮತೆಗೆ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತವಾಗಿದೆ. ನಿರ್ವಾಹಕ ಅಶೋಕ್ ಜಾದವ್ ಅವರೇ ಕಳ್ಳರನ್ನು ಪೊಲೀಸರಿಗೊಪ್ಪಿಸಿ ವೃತ್ತಿಪರತೆ ಮೆರೆದವರು. ತಾನು ನಿರ್ವಾಹಕನಾಗಿದ್ದ ಬಸ್‌ನಲ್ಲಿ ಈ ಹಿಂದೆ ಕಳ್ಳತನ ಮಾಡಿ ಮಾರ್ಗ ಮಧ್ಯೆ ಇಳಿದು ಹೋದ ಪ್ರಯಾಣಿಕರ ಮುಖ ಚಹರೆಯನ್ನು ನೆನಪಿನಲ್ಲಿಟ್ಟುಕೊಂಡು ಅದೇ ಪ್ರಯಾಣಿಕರು ಸುಮಾರು ನಾಲ್ಕು ತಿಂಗಳ ನಂತರ ಬಸ್ಸಿಗೆ ಬಂದಾಗ ಅವರನ್ನು ಗುರುತಿಸಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ ನಿರ್ವಾಹಕ ಅಶೋಕ್ ಜಾದವ್ ಅವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅಭಿನಂದಿಸಿದ್ದಾರೆ. ನಿಗಮದ ಚಾಲನಾ ಸಿಬ್ಬಂದಿಗಳ ಕಾರ್ಯತತ್ಪರತೆ ಮತ್ತು ಪ್ರಯಾಣಿಕ ಸ್ನೇಹಿ ಕೆಲಸವು ಪ್ರಯಾಣಿಕರಲ್ಲಿ ಸಂಸ್ಥೆಯ ಬಗ್ಗೆ ವಿಶ್ವಾಸಾರ್ಹತೆಯನ್ನು ಮೂಡಿಸುವಲ್ಲಿ ಸಹಕರಿಸಿದೆ ಎಂದವರು ಶ್ಲಾಘಿಸಿದ್ದಾರೆ.
ಏನಿದು ಘಟನೆ?
ಕಳೆದ ಜುಲೈ 10ರಂದು ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ವೋಲ್ವೋ ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿದ್ದ ಕಳ್ಳರಿಬ್ಬರ ಪೈಕಿ ಓರ್ವ ಉಪ್ಪಿನಂಗಡಿಯ ಗಡಿಯಾರದ ಬಳಿ ಮುಂಜಾನೆ ಸುಮಾರು 5 ಗಂಟೆ ವೇರೆಗೆ ನೈಸರ್ಗಿಕ ಕರೆಗೆ ಹೋಗಬೇಕೆಂದು ಮನವಿ ಮಾಡಿದ ಮೇರೆಗೆ ವಾಹನದ ಚಾಲಕ ಮತ್ತು ನಿರ್ವಾಹಕ ಬಸ್ ನಿಲ್ಲಿಸಿದ್ದಾರೆ. ಆತ ಹೋಗಿ ಐದು ನಿಮಿಷ ಕಳೆದಾಗ ಇನ್ನೊಬ್ಬ ಪ್ರಯಾಣಿಕ ಸಹ ಇದೇ ಕಾರಣ ತಿಳಿಸಿ ಇಳಿದು ಹೋಗಿದ್ದಾನೆ. ಆದರೆ ಹತ್ತು ನಿಮಿಷವಾದರೂ ಇಬ್ಬರು ಪ್ರಯಾಣಿಕರು ಬಾರದಿರುವ ಹಿನ್ನೆಲೆಯಲ್ಲಿ ಅವರಿಗೆ ಕರೆ ಮಾಡಿದಾಗ ಇಬ್ಬರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ. ಕೂಡಲೇ ನಿರ್ವಾಹಕ ಅಶೋಕ್ ಜಾದವ್ ಅವರು ಘಟಕಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದು, ಘಟಕದ ಸೂಚನೆ ಮೇರೆಗೆ ಸುಮಾರು 15 ನಿಮಿಷಗಳವರೆಗೆ ಪ್ರಯಾಣಿಕರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರು ಪ್ರಯಾಣಿಕರಿಗಾಗಿ ಹುಡುಕಾಟ ನಡೆಸಲಾಗಿದೆ. ಆದರೆ ಅವರು ಅಲಭ್ಯರಾದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಬಸ್‌ನಲ್ಲಿರುವ ಎಲ್ಲಾ ಪ್ರಯಾಣಿಕರಿಗೆ ತಮ್ಮ ಲಗೇಜ್‌ಗಳನ್ನು ಪರಿಶೀಲಿಸುವಂತೆ ತಿಳಿಸಲಾಯಿತು. ಪ್ರಯಾಣಿಕರು ಲಗೇಜ್‌ಗಳಲ್ಲಿ ಎಲ್ಲಾ ವಸ್ತುಗಳು ಇವೆ ಎಂದ ಬಳಿಕ ವಾಹನವನ್ನು ಘಟಕಕ್ಕೆ ತರಲಾಯಿತು.
ಆದರೆ ಅದೇ ದಿನ ಬೆಳಗ್ಗೆ ಪ್ರಯಾಣಿಕರಾದ ಲಕ್ಷ್ಮೀ ಅವರು ನಿರ್ವಾಹಕರಿಗೆ ಕರೆ ಮಾಡಿ ತಮ್ಮ ಬ್ಯಾಗ್‌ನೊಳಗಿಟ್ಟಿದ್ದ ಸುಮಾರು ಎರಡೂವರೆ ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಹಣ ಕಳೆದು ಹೋಗಿರುವುದಾಗಿ ತಿಳಿಸಿದರು. ಕೂಡಲೇ ಘಟಕಕ್ಕೆ ಈ ವಿಷಯವನ್ನು ತಿಳಿಸಿ ಅವರ ಸೂಚನೆಯಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಪ್ರಯಾಣಿಕರಾದ ಲಕ್ಷ್ಮಿ ಅವರಿಗೆ ಸೂಚಿಸಲಾಯಿತು. ಬಳಿಕ ಇಳಿದು ಹೋದ ಪ್ರಯಾಣಿಕರಿಬ್ಬರ ಫೋನ್ ನಂಬರ್‌ನ್ನು ಅವತಾರ್ ಬುಕ್ಕಿಂಗ್‌ನಲ್ಲಿ ಟ್ರ್ಯಾಕ್ ಮಾಡಿ ಪರಿಶೀಲಿಸಿದಾಗ ಅವರು ಸತತವಾಗಿ ಕ್ಲಬ್ ಕ್ಲಾಸ್ ವೋಲ್ವೋ ವಾಹನದಲ್ಲಿ ಪ್ರಯಾಣಿಸಿರುವುದು ಗೊತ್ತಾಗಿತ್ತು. ಕೂಡಲೇ ಎಲ್ಲಾ ಪ್ರಯಾಣದ ವಿವರಗಳನ್ನು ಹಣ ಕಳೆದುಕೊಂಡ ಪ್ರಯಾಣಿಕರಿಗೆ ನೀಡಿ ಪೊಲೀಸ್ ದೂರು ನೀಡುವಂತೆ ಸೂಚಿಸಲಾಯಿತು. ಅದರಂತೆ ಹಣ ಮತ್ತು ಒಡವೆ ಕಳೆದು ಹೋಗಿರುವ ಬಗ್ಗೆ ಪುತ್ತೂರು ಹಾಗೂ ಬೆಂಗಳೂರಿನಲ್ಲಿ ಲಕ್ಷ್ಮೀ ಅವರು ದೂರು ದಾಖಲಿಸಿದ್ದರು.
ನಾಲ್ಕು ತಿಂಗಳ ಬಳಿಕ ಅಂದರೆ ನವೆಂಬರ್ 12ರ ಶುಕ್ರವಾರ ರಾತ್ರಿ ಸುಮಾರು 9:45ಕ್ಕೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಂಗಳೂರಿಗೆ ತೆರಳಲು ಸಿದ್ದಗೊಂಡಿದ್ದ ಬಸ್‌ನಲ್ಲಿ ನಿರ್ವಾಹಕ ಅಶೋಕ್ ಜಾದವ್ ಅವರು ಟ್ರಿಪ್ ಶೀಟ್‌ನ್ನು ಪರಿಶೀಲಿಸುತ್ತಿದ್ದ ವೇಳೆ ಸೀಟ್ ನಂಬರ್ 29 ಮತ್ತು 30ರ ಪ್ರಯಾಣಿಕರು ಬೇಗನೇ ಬಸ್ ಏರಿ ತಮ್ಮ ಸೀಟ್‌ನಲ್ಲಿ ಆಸೀನರಾಗಿದ್ದರು. ಅಲ್ಲದೆ ಬಸ್ ಹಾಗೂ ಇತರ ಪ್ರಯಾಣಿಕರ ಚಲನವಲನಗಳನ್ನು ಈ ಇಬ್ಬರು ಪ್ರಯಾಣಿಕರು ಗಮನಿಸುತ್ತಿರುವುದನ್ನು ನೋಡಿ ನಿರ್ವಾಹಕ ಅಶೋಕ್ ಜಾದವ್ ಅವರಿಗೆ ಅವರಿಬ್ಬರ ಮೇಲೆ ಅನುಮಾನ ಬಂದಿದೆ. ಕೂಡಲೇ ಅವರ ಬಳಿ ತೆರಳಿ ಪರಿಶೀಲಿಸಿದಾಗ ಅವರಿಬ್ಬರೂ ಉಪ್ಪಿನಂಗಡಿಯಲ್ಲಿ ಈ ಹಿಂದೆ ಪ್ರಯಾಣಿಕರ ಹಣ ಹಾಗೂ ಒಡವೆ ಕದ್ದು ಇಳಿದು ಹೋದ ಪ್ರಯಾಣಿಕರೇ ಎಂಬುದನ್ನು ಗುರುತಿಸಿದ್ದಾರೆ. ಕೂಡಲೇ ಇಬ್ಬರಿಗೂ ಯಾವುದೇ ಅನುಮಾನ ಬಾರದಂತೆ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಘಟಕದ ಸೂಚನೆಯಂತೆ ಅಲ್ಲಿನ ಸಂಚಾರ ನಿಯಂತ್ರಕರು ಹಾಗೂ ಭದ್ರತಾ ಸಿಬಂದಿಗೆ ಮಾಹಿತಿ ನೀಡಿ ಬಳಿಕ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ. ಬಳಿಕ ಕೆಬಿಎಸ್‌ನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆ ಇಬ್ಬರು ಪ್ರಯಾಣಿಕರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಬಸ್‌ನಿಂದ ಪ್ರಯಾಣಿಕರ ಒಡವೆ, ಹಣ ದೋಚಿ ಪರಾರಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಬಳಿಕ ಹಣ, ಒಡವೆ ಕಳೆದುಕೊಂಡ ಲಕ್ಷ್ಮೀ ಅವರಿಗೆ ಹಾಗೂ ಪುತ್ತೂರು ಮತ್ತು ಕದ್ರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು.