ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ಬೃಹತ್ ಸಾರ್ವಜನಿಕ ಆಗ್ರಹ ಸಭೆಯು ಕೂಳೂರು ಕುದ್ರೆಮುಖ ಕಂಪೆನಿ ಮುಂಭಾಗ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತಾಡಿದ ರಾಜ್ಯ ಹಿಂದುಳಿದ ವರ್ಗದ ಅಧ್ಯಕ್ಷ ಮಧು ಬಂಗಾರಪ್ಪ ಅವರು, “ದುಡ್ಡು ಸಿಗೋದಾದ್ರೆ ಬಿಜೆಪಿ ನಾಯಕರು ಏನ್ ಬೇಕಾದ್ರು ಮಾಡ್ತಾರೆ. ಅವ್ರಿಗೆ ಮಾನ ಮರ್ಯಾದೆಯಿಲ್ಲ. ದೇಶದಲ್ಲಿ ಬಿಜೆಪಿ ಆಡಳಿತದಿಂದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇವರದ್ದು ಒಂತರಾ ಪರ್ಸಂಟೇಜ್ ಗ್ಯಾಂಗ್ ಇದ್ದಂತೆ. ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ ಆಗೋಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜ ಅವರು ಮಾತಾಡಿ, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವಜನರಿಗೆ ಉದ್ಯೋಗ ಸಿಗುತ್ತಿಲ್ಲ. ಕಷ್ಟಪಟ್ಟು ಶಿಕ್ಷಣ ಪಡೆದ ಯುವಕರು ಉದ್ಯೋಗ ಇಲ್ಲದೆ ಅಲೆಯುತ್ತಿದ್ದಾರೆ. ಕುದ್ರೆಮುಖ ಕಂಪೆನಿ ತನ್ನ ಉತ್ಪಾದನೆಯನ್ನೇ ನಿಲ್ಲಿಸಿದೆ. ಇದಕ್ಕೆ ಕೇಂದ್ರ ಸರಕಾರ ವಿಧಿಸಿರುವ ಹತ್ತಾರು ಪಟ್ಟು ಟ್ಯಾಕ್ಸ್ ಹೆಚ್ಚಳ ಕಾರಣ. ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದ್ದು ಸಾವಿರಾರು ಮಂದಿಗೆ ಉದ್ಯೋಗ ನೀಡಬೇಕಿದ್ದ ಜೆಬಿಎಫ್ ಕಂಪೆನಿ ಸೆಜ್ ನಲ್ಲಿ ಪೂರ್ಣಗೊಂಡು ಹಲವು ವರ್ಷ ಕಳೆದರೂ ಇನ್ನೂ ಪ್ರಾರಂಭಗೊಳ್ಳುತ್ತಿಲ್ಲ” ಎಂದರು.
ಬಳಿಕ ಮಾತಾಡಿದ ಮಾಜಿ ಶಾಸಕ ಮೊಯಿದೀನ್ ಬಾವಾ ಅವರು, “ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ತಂದಿದ್ದ ಬೃಹತ್ ಕಂಪೆನಿಗಳನ್ನು ಮುಚ್ಚಿಸಿದ್ದೇ ಬಿಜೆಪಿ ಸಾಧನೆ. ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರು ಒಂದೇ ಒಂದು ಕೈಗಾರಿಕೆಯನ್ನು ಜಿಲ್ಲೆಗೆ ತಂದಿದ್ದರೆ ಎದೆತಟ್ಟಿ ಹೇಳಲಿ. ಜಿಲ್ಲೆಯ ಯುವಜನರಿಗೆ ಕೆಲಸ ನೀಡಿದ್ದೀರಾ ಅದೂ ಇಲ್ಲ. ಯುವಜನತೆ ನಿರುದ್ಯೋಗಿಗಳಾಗಲು ಬಿಜೆಪಿ ಸರಕಾರದ ಭ್ರಷ್ಟ ಆಡಳಿತವೇ ಕಾರಣ” ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಮಾಜಿ ಶಾಸಕ ಮೊಯಿದೀನ್ ಬಾವಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಹಾರಿಸ್ ಬೈಕಂಪಾಡಿ, ಶಾಲೆಟ್ ಪಿಂಟೋ, ಅಬ್ಬಾಸ್ಅಲಿ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಅಲ್ಪ ಸಂಖ್ಯಾತ ವಿಭಾಗದ ಶಾಹುಲ್ ಹಮೀದ್, ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ರಾಘವೇಂದ್ರ ರಾವ್, ಬಜ್ಪೆ ಪಂಚಾಯತ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.