ಸಮಗ್ರ ನ್ಯೂಸ್: ಟಿ20 ವಿಶ್ವಕಪ್ ಆಡಲು ಆಸ್ಟ್ರೇಲಿಯಾದಲ್ಲಿರುವಾಗ ಮಹಿಳೆಯೊಬ್ಬಳ ಮೇಲೆ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಅನೇಕ ಬಾರಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡುವ ಯತ್ನವು ನಡೆದಿದ್ದು, ಮೆದುಳಿನಲ್ಲಿ ಗಾಯವಾಗಿದೆಯೇ ಎಂಬುದನ್ನು ತಿಳಿಯಲು ಸಂತ್ರಸ್ತೆಗೆ ಸ್ಕ್ಯಾನ್ ಮಾಡಿಸುವ ಅವಶ್ಯಕತೆ ಇದೆ ಎಂದು ಸಿಡ್ನಿ ಪೊಲೀಸರು ಕೋರ್ಟ್ಗೆ ಸಲ್ಲಿಸಿರುವ ದಾಖಲೆಗಳಲ್ಲಿ ಉಲ್ಲೇಖಿಸಿದ್ದಾರೆ.
ನವೆಂಬರ್ 2ರಂದು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ತನಿಖೆಯ ನಂತರ 31 ವರ್ಷದ ಗುಣತಿಲಕ ಅವರನ್ನು ಭಾನುವಾರ (ನ.06) ನಸುಕಿನ ಜಾವ ಸಿಡ್ನಿ ನಗರ ಪೊಲೀಸರು ಬಂಧಿಸಿದರು. ಕೋರ್ಟ್ ಮುಂದೆ ಗುಣತಿಲಕ ಅವರನ್ನು ಹಾಜರುಪಡಿಸಲಾಗಿದೆ. ಪ್ರಕರಣ ಗಂಭೀರ ಸ್ವರೂಪ ಆಗಿರುವುದರಿಂದ ಜಾಮೀನು ನಿರಾಕರಣೆ ಮಾಡಲಾಗಿದೆ.
ನವೆಂಬರ್ 2 ರಂದು ಸಿಡ್ನಿಯ ಒಪೇರಾ ಹೌಸ್ ಬಳಿಯ ಜನಪ್ರಿಯ ಬಾರ್ನಲ್ಲಿ ಭೇಟಿಯಾಗುವ ಮೊದಲು ಜೋಡಿಯು ಡೇಟಿಂಗ್ ಅಪ್ಲಿಕೇಶನ್ನಲ್ಲಿ ಸಂಪರ್ಕ ಹೊಂದಿದ್ದರು. ಬಾರ್ನಲ್ಲಿ ಭೇಟಿಯಾದ ಬಳಿಕ ಗುಣತಿಲಕ ದೋಣಿಯಲ್ಲಿ ಸಂತ್ರಸ್ತೆಯ ಮನೆಗೆ ಒಟ್ಟಿಗೆ ಪ್ರಯಾಣಿಸಿದರು. ಇಬ್ಬರು ಸಾಕಷ್ಟು ಮದ್ಯ ಸೇವಿಸಿದ ನಂತರ ಗುಣತಿಲಕ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದರು ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ.
ಕಾಂಡೋಮ್ ಅನ್ನು ಧರಿಸಲು ಕೇಳಿದರೂ ಅದನ್ನು ವಿರೋಧಿಸಿ ಬಲವಂತಾಗಿ ಲೈಂಗಿಕ ಕ್ರಿಯೆ ನಡೆಸಿದರು ಎಂದು ಮಹಿಳೆ ಆರೋಪ ಮಾಡಿದ್ದಾರೆ.
ಗುಣತಿಲಕ ವಿರುದ್ಧ ಗಂಭೀರ ಆರೋಪ ಕೇಳಿಬಂದಿರುವುದರಿಂದ ಎಲ್ಲ ಮಾದರಿಯ ಪಂದ್ಯದಿಂದ ಗುಣತಿಲಕರನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಮಾನತು ಮಾಡಿದೆ. ಸದ್ಯ ತನಿಖೆ ಮುಂದುವರಿದಿದ್ದು, ಗುಣತಿಲಕ ಸಿಡ್ನಿ ಪೊಲೀಸರ ಬಂಧನದಲ್ಲಿದ್ದಾರೆ. ಅಂದಹಾಗೆ ಶ್ರೀಲಂಕಾ ತಂಡ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.