ಬೆಂಗಳೂರು: ರಾಜ್ಯ ಸರ್ಕಾರದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರಕಾರಕ್ಕೆ ಶಿಫಾರಸ್ಸು ಒಂದನ್ನು ಮಾಡಿದ್ದು ಸದ್ಯ ರಾಜ್ಯದಲ್ಲಿರುವ ಲಾಕ್ಡೌನ್ ಅನ್ನು ಮುಂದುವರೆಸುವಂತೆ ಸಲಹೆ ನೀಡಿದೆ.
ಮೇ 30ರಂದು ನಡೆದ ತಜ್ಞರನ್ನೊಳಗೊಂಡ 14 ಸದಸ್ಯರುಗಳ, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆಯ ವರದಿ ನಿನ್ನೆ ರಾಜ್ಯ ಸರ್ಕಾರದ ಕೈಸೇರಿದೆ. ವರದಿಯಲ್ಲಿ ದಿನದ ಕೋವಿಡ್ ಪಾಸಿಟಿವ್ ಪ್ರಮಾಣ ಶೇಕಡಾ 5ಕ್ಕಿಂತ ಕೆಳಗೆ ಬರುವವರೆಗೆ ಮತ್ತು ಮರಣ ಪ್ರಮಾಣ ಶೇಕಡ 1ಕ್ಕಿಂತ ಕೆಳಗೆ ಇಳಿಯುವವರೆಗೆ ರಾಜ್ಯದಲ್ಲಿ ಸದ್ಯ ಇರುವ ನಿರ್ಬಂಧಗಳನ್ನು ಮುಂದುವರಿಸಬೇಕು ಎಂದು ಸಮಿತಿ ಆರೋಗ್ಯ ಸಚಿವ ಡಾ. ಸುಧಾಕರ್ ಅವರಿಗೆ ನೀಡಿದ ವರದಿಯಲ್ಲಿ ತಿಳಿಸಿದೆ.
ಸದ್ಯ ರಾಜ್ಯದಲ್ಲಿ ದಿನದ ಕೋವಿಡ್ ಪಾಸಿಟಿವ್ ಪ್ರಮಾಣ ಶೇಕಡ 13 ಕ್ಕಿಂತ ಮೇಲಿದ್ದು, ಮರಣ ಪ್ರಮಾಣ ಶೇಕಡಾ 2.47 ರಷ್ಟಿದೆ. ಇದು ಜೂನ್ 7 ರ ಒಳಗಾಗಿ ತಜ್ಞರ ಶಿಫಾರಸ್ಸಿನಷ್ಟು ತಗ್ಗುವ ಸಾಧ್ಯತೆ ಬಹಳ ಕಡಿಮೆ ಇದೆ. ಇನ್ನು ಲಾಕ್ಡೌನ್ ಮಾಡಬೇಕೇ ಅಥವಾ ಯಾವರೀತಿ ನಿರ್ಬಂಧಗಳನ್ನು ಹೇರಬೇಕು ಎನ್ನುವುದು ರಾಜ್ಯ ಸರಕಾರಕ್ಕೆ ಬಿಟ್ಟದ್ದು ಎಂದು ಸಮಿತಿ ಅಭಿಪ್ರಾಯ ತಿಳಿಸಿದೆ.