ಬೆಂಗಳೂರು: ಟಿಕೆಟ್ ಆಕಾಂಕ್ಷಿಗಳಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಲಕ್ಷ-ಲಕ್ಷ ಲೂಟಿ ಮಾಡ್ತಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, 2018ರಲ್ಲಿ ನಾಮಪತ್ರ ಸಲ್ಲಿಸಲು ಕಾರ್ಯಕರ್ತರಿಂದ ಡಿಕೆ ಶಿವಕುಮಾರ್ 50-100 ಭಿಕ್ಷೆ ಬೇಡಿದರು. ಇದೀಗ ಕೋಟಿ-ಕೋಟಿ ರೂಪಾಯಿ ಆಸ್ತಿ ಇದ್ದರೂ, ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಲಕ್ಷ-ಲಕ್ಷ ಲೂಟಿ ಮಾಡಲು ಹೊರಟಿದೆ. ಇದರಿಂದ ಆಕಾಂಕ್ಷಿಗಳ ಜೇಬು ಖಾಲಿಯಾಗಲಿದೆಯೇ ಹೊರತು ಖಾಲಿಯಾದ ಜೇಬಿಗೆ ಟಿಕೆಟ್ ಬರುವುದಿಲ್ಲ ಎಂದು ಕುಟುಕಿದೆ.
ಅಧಿಕಾರ ದುರ್ಬಳಕೆ ಮಾಡಿಕೊಂಡ ಕರ್ನಾಟಕ ಕಾಂಗ್ರೆಸ್‌ನ ದುಷ್ಟರೆಲ್ಲ ಜಾಮೀನಿನ ಮೇಲೆ ಜೀವನ ಸಾಗಿಸುತ್ತಿದ್ದಾರೆ. ನಾಡನ್ನು ಅರಾಜಕತೆಯಿಂದ ತಪ್ಪಿಸಿದ ಬಿಜೆಪಿಯ ದಕ್ಷ ಆಡಳಿತವು ಭ್ರಷ್ಟರಿಗೆ ಸೆರೆಮನೆಯ ದಾರಿ ತೋರಿಸಿ, ಜನತೆಗೆ ನೆಮ್ಮದಿ ನೀಡುತ್ತಿದೆ ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಕ್ರೇನ್ ಹರಿದು ವಿದ್ಯಾರ್ಥಿನಿ ದಾರುಣ ಸಾವು
ಡಿಕೆಶಿ ಹೇಳಿದ್ದೇನು?
ಎರಡು ದಿನಗಳ ಹಿಂದೆಯಷ್ಟೇ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬೇಕಾದವರು ಅರ್ಜಿ ಸಲ್ಲಿಸಬಹುದು, ಪಕ್ಷಕ್ಕೆ ಬರುವವರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಎಂದು ಹೇಳಿದ್ದರು.
ಕಾಂಗ್ರೆಸ್ ನಿಂದ ವಲಸೆ ಹೋದವರಿಗೂ ಮುಕ್ತ ಆಹ್ವಾನವಿದೆ. ನಾನು ಇದನ್ನು ಪಕ್ಷದ ಅಧ್ಯಕ್ಷನಾಗಿ ಮಾತನಾಡ್ತಿದ್ದೇನೆ. ಯಾರೂ ಬೇಕಾದರೂ ಪಕ್ಷಕ್ಕೆ ಬರಬಹುದು, ಅರ್ಜಿ ಹಾಕುವವರಿಗೆ ಮುಕ್ತ ಅವಕಾಶವಿದೆ. ಯಾರು ಬೇಕಾದ್ರೂ ಬರಲಿ ನೋ ಪ್ರಾಬ್ಲಂ. ಮೊದಲು ಅವರು ಅರ್ಜಿ ಹಾಕಲಿ, ಆಮೇಲೆ ನಮ್ಮ ಕಮಿಟಿ ಪರಿಶೀಲಿಸುತ್ತದೆ ಎಂದು ತಿಳಿಸಿದ್ದರು.
ಅರ್ಜಿಗೆ 5 ಸಾವಿರ ರೂ. ನಿಗದಿ ಮಾಡಲಾಗಿದೆ. ಜೊತೆಗೆ ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರು 2 ಲಕ್ಷ ರೂ., ಎಸ್ಸಿ-ಎಸ್ಟಿ ವರ್ಗದವರು (SCST Community) 1 ಲಕ್ಷ ರೂ. ಡಿಡಿ ಲಗತ್ತಿಸಬೇಕು. ಆ ಹಣವನ್ನು ಕೆಪಿಸಿಸಿ ಕಟ್ಟಡದ ನಿರ್ಮಾಣಕ್ಕೆ ಬಳಸಿಕೊಳ್ಳುತ್ತದೆ. ನಾನು ಸ್ಪರ್ಧೆ ಮಾಡಬೇಕೆಂದರೂ ಅರ್ಜಿ ಸಲ್ಲಿಸಬೇಕು. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದುಕೊಂಡವರು ಮೊದಲು ಅರ್ಜಿ ಸಲ್ಲಿಸಿ ಎಂದು ಹೇಳಿದ್ದರು.