ಸಮಗ್ರ ನ್ಯೂಸ್: ಬಹು ನಿರೀಕ್ಷಿತ ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಗುರುವಾರ ಮಧ್ಯಾಹ್ನ ಪ್ರಕಟಿಸಿದೆ.
ಚುನಾವಣೆಯು ಡಿಸೆಂಬರ್ 1 ಹಾಗೂ 5 ರಂದು ಎರಡು ಹಂತದಲ್ಲಿ ನಡೆಯಲಿದೆ. ಡಿಸೆಂಬರ್ 8ರಂದು ಹಿಮಾಚಲ ಪ್ರದೇಶದ ಜೊತೆಗೆ ಗುಜರಾತ್ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಭೀಕರ ಸೇತುವೆ ಕುಸಿತ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಮಾಧ್ಯಮಗಳೊಂದಿಗೆ ತಮ್ಮ ಸಂವಾದವನ್ನು ಆರಂಭಿಸಿದರು.
ಗುಜರಾತ್‌ನಲ್ಲಿ 4.9 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 80 ವರ್ಷ ಮೇಲ್ಪಟ್ಟ ಮತದಾರರು ಹಾಗೂ ಕೋವಿಡ್-19 ರೋಗಿಗಳು ಮನೆಯಿಂದಲೇ ಮತ ಚಲಾಯಿಸಬಹುದು ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದೆ.
2017ರಲ್ಲಿ ನಡೆದ ಚುನಾವಣೆಯಲ್ಲಿ 182 ಸ್ಥಾನಗಳ ಪೈಕಿ 99ರಲ್ಲಿ ಬಿಜೆಪಿ ಗೆದ್ದಿದ್ದರೆ, 77 ಸೀಟುಗಳು ಕಾಂಗ್ರೆಸ್ ಗೆದ್ದುಕೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯದಲ್ಲಿ ಆಡಳಿತ ಪಕ್ಷ ಬಿಜೆಪಿ ಸತತ ಆರನೇ ಅವಧಿಗೆ ಆಯ್ಕೆಯಾಗಲು ಎದುರು ನೋಡುತ್ತಿದೆ.
ಮೊರ್ಬಿಯಲ್ಲಿ ಇತ್ತೀಚೆಗೆ 135 ಜನರ ಸಾವಿಗೆ ಕಾರಣವಾದ ಸೇತುವೆ ದುರಂತ ಭಾರೀ ಚರ್ಚೆಯಲ್ಲಿರುವಾಗಲೇ ಬಿಜೆಪಿಯ ಭದ್ರಕೋಟೆಯಲ್ಲಿ ಹೈ ವೋಲ್ಟೇಜ್ ಚುನಾವಣೆಯ ಬಹುನಿರೀಕ್ಷಿತ ದಿನಾಂಕ ಘೋಷಣೆಯಾಗಿದೆ.