ಬೆಂಗಳೂರು ಆಡಳಿತ ಪಕ್ಷದ ಶಾಸಕರು ಮತ್ತು ಸಂಸದರುಗಳು ಲಸಿಕೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದಾರೆ. ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳ ಮುಖಾಂತರ ದುಬಾರಿ ಬೆಲೆಗೆ ಮಾರಾಟ ಮಾಡಿಸಿ ಲಾಭ ಪಡೆಯಲಾಗುತ್ತಿದೆ ಇಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಕನಿಷ್ಠ 900 ರಿಂದ 1200 ರೂ. ಹಣ ಪಡೆದು ಲಸಿಕೆಯನ್ನು ಜನಸಾಮಾನ್ಯರಿಗೆ ಮಾರಾಟ ಮಾಡಲಾಗುತ್ತಿದೆ. ತಮ್ಮ ಬಳಿ ಅಷ್ಟು ಹಣವಿಲ್ಲ ಎಂದು ಜನಸಾಮಾನ್ಯ ಹೇಳಿದಾಗ ಇದರಲ್ಲಿ 700 ರೂ. ಶಾಸಕ ರವಿಸುಬ್ರಹ್ಮಣ್ಯ ಅವರಿಗೆ ನೀಡಬೇಕಾಗಿದೆ ಎಂದು ಲಸಿಕೆ ಹಾಕುತ್ತಿರುವ ವ್ಯಕ್ತಿ ಹೇಳಿರುವರು ಎನ್ನಲಾದ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಮಾವ ರವಿಸುಬ್ರಹ್ಮಣ್ಯ ಲಸಿಕೆ ಮಾರಿ ಹಣ ಸಂಪಾದಿಸುತ್ತಿದ್ದಾರೆ. ಈ ಸಂಬಂಧ ಅವರಿಬ್ಬರ ಮೇಲೆ ಎಫ್ಐಆರ್ ದಾಖಲಿಸಿ ಇಬ್ಬರನ್ನು ಸಂಸದ ಮತ್ತು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಬಿಗುವಾಗಿ ಆರೋಪಿಸಿದೆ.