ಸಮಗ್ರ ನ್ಯೂಸ್: ಮಂಗಳೂರು ವಿ.ವಿ ಯಿಂದ ಹಲವಾರು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದು,ಬಗೆಹರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶುಕ್ರವಾರ ಕ್ಲಾಕ್ ಟವರ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ.
UUCMS ತಂತ್ರಾಂಶದ ಲೋಪದೋಶದಿಂದ NEP ಯ ಪ್ರಥಮ ವರ್ಷದ ಪದವಿ ಮುಗಿಸಿರುವ ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಮಾಡಿ, ಫಲಿತಾಂಶವನ್ನು ನೀಡದೆ ವಿದ್ಯಾರ್ಥಿಗಳು ಗೊಂದಲದಲ್ಲಿ ಶಿಕ್ಷಣವನ್ನು ಮುಂದುವರಿಸುವಂತೆ ಆಗಿದೆ . ವಿದ್ಯಾರ್ಥಿಗೆ ದೊರೆಯುವ ಎಲ್ಲಾ ಸೌಲಭ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗುವಂತೆ ಹಾಗೂ ಬೇರೆ ಕಾಲೇಜಿಗೆ ವರ್ಗಾವಣೆಯನ್ನು ವಿದ್ಯಾರ್ಥಿ ಪಡೆಯದ ರೀತಿ ಸಮಸ್ಯೆಯು ಎದುರಾಗಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ಸರಿಯಾದ ಸಮಯಕ್ಕೆ ಅಂಕಪಟ್ಟಿ ವಿತರಣೆಯನ್ನು ನಡೆಸುತ್ತಿಲ್ಲ, 2021 ರಲ್ಲಿ ಅಂತಿಮ ವರ್ಷದ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಸ್ತುತ ವಿದ್ಯಾಭ್ಯಾಸ ನಡೆಸುತ್ತಿರುವ, B.com ಹೊರತಾಗಿ ಬಹುತೇಕ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯನ್ನು ವಿ.ವಿ ಯು ನೀಡಿರುವುದಿಲ್ಲ ಎಂದು ಆರೋಪಿಸಲಾಗಿದೆ.
2022 ಮಾರ್ಚ್ ನಲ್ಲಿ ಮರು ಮೌಲ್ಯ ಮಾಪನಕ್ಕೆ ಶುಲ್ಕಪಾವತಿ ಮಾಡಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ವಿ.ವಿ ನಡೆಸಿರುವುದಿಲ್ಲ, ವಿದ್ಯಾರ್ಥಿಗಳು 7 ತಿಂಗಳುಗಳಿಂದ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿಸಲಾಗಿದೆ.
ಮಂಗಳೂರು ವಿ.ವಿ ಯಿಂದ ದೂರ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ನೀಡಿರುವುದಿಲ್ಲ, ಹಲವಾರು ವಿದ್ಯಾರ್ಥಿಗಳು ಅಂಕಪಟ್ಟಿ ದೊರೆಯದೆ ವಿ.ವಿ ಗೆ ಅಲೆದಾಡುವಂತಾಗಿದೆ. ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ಅಂಕಪಟ್ಟಿಗಳು ಸರಿಯಾಗಿ ದೊರೆಯುತ್ತಿಲ್ಲ, ಫಲಿತಾಂಶಗಳನ್ನು ವಿಳಂಬವಾಗಿ ನೀಡುತ್ತಿರುವುದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಸೆಪ್ಟಂಬರ್ ನಲ್ಲಿ ಈ ಬಾರಿ ನಡೆದಿರುವ ಪರೀಕ್ಷೆಗಳ ಮೌಲ್ಯ ಮಾಪನವನ್ನು ನಡೆಸಿ ಕೂಡಲೇ ಫಲಿತಾಂಶ ನೀಡುವ ಅಗತ್ಯವಿದೆ. ಫಲಿತಾಂಶ ವಿಳಂಬವಾದಲ್ಲಿ ಸ್ನಾತಕೊತ್ತರ ಶಿಕ್ಷಣವನ್ನು ಪಡೆಯುವಲ್ಲಿ ವಿದ್ಯಾರ್ಥಿಗಳು ವಂಚಿತರಾಗಲಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.