ಸಮಗ್ರ ನ್ಯೂಸ್: ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಅಕ್ಟೋಬರ್, 17 ರ ಇಂದು ರಾತ್ರಿ 7 ಗಂಟೆ 21 ನಿಮಿಷಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಶ್ರೀ ಮೂಲ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದ ಪುಣ್ಯ ಕಾಲ ನೆರವೇರಲಿದೆ.
ಅ.17ರ ರಾತ್ರಿ(ಸೋಮವಾರ) 7.21 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಜಿಲ್ಲಾಡಳಿತ ವತಿಯಿಂದ ತಯಾರಿ ಮಾಡಿಕೊಳ್ಳಲಾಗಿದೆ. ದೇವಾಲಯ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರ ನೇತೃತ್ವದಲ್ಲಿ ಭಾಗಮಂಡಲದಿಂದ ತಲಕಾವೇರಿಗೆ ಶಾಸ್ತ್ರೋಕ್ತವಾಗಿ ಚಿನ್ನಾಭರಣ ತೆಗೆದುಕೊಂಡು ಹೋಗಿ ತಾಯಿ ಶ್ರೀ ಕಾವೇರಿ ಮಾತೆಗೆ ತೊಡಿಸಲಾಯಿತು. ಕ್ಷೇತ್ರದ ತುಂಬಾ ಹೂವಿನ ಅಲಂಕಾರ ಮಾಡಲಾಗಿದೆ.
ಭಾಗಮಂಡಲದಲ್ಲಿ ಪಿಂಡ ಪ್ರದಾನ, ಕೇಶ ಮುಂಡನಕ್ಕೆ ಪ್ರತ್ಯೇಕ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಪುಣ್ಯ ಸ್ನಾನಕ್ಕೆ ಅನುಕೂಲ ಮಾಡುವ ದೃಷ್ಟಿಯಿಂದ ಈಗಾಗಲೇ ತ್ರಿವೇಣಿ ಸಂಗಮದಲ್ಲಿ ಮರಳು ಮಿಶ್ರಿತ ಹೂಳನ್ನು ತೆಗೆಯಲಾಗಿದ್ದು, ಸೇತುವೆ ಬಳಿ ಮರದ ಹಲಗೆಗಳನ್ನು ಬಳಸಿ ನೀರನ್ನು ತಡೆ ಹಿಡಿಯಲಾಗಿದೆ.
ಭಾಗಮಂಡಲದಿಂದ ತಲಕಾವೇರಿವರೆಗಿನ 8 ಕಿ.ಮೀ ರಸ್ತೆ ಉದ್ದಕ್ಕೂ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು, ನಡೆದುಕೊಂಡು ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿದೆ. ರಸ್ತೆ ಬದಿಯಲ್ಲಿ ಬೆಳೆದಿದ್ದ ಕುರುಚಲು ಕಾಡುಗಳನ್ನು ತೆರವು ಮಾಡಲಾಗಿದ್ದು, ದಟ್ಟ ಮಂಜು ಮುಸುಕುವ ವಾತಾವರಣದ ನಡುವೆ ವಾಹನ ಸವಾರರು ಸಂಚರಿಸಲು ಅನುಕೂಲ ಕಲ್ಪಿಸಲಾಗಿದೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.