ಸಮಗ್ರ ನ್ಯೂಸ್: ಅರಸೀಕೆರೆ ತಾಲ್ಲೂಕಿನ ಗಾಂಧಿನಗರ ಬಳಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟ ಪ್ರಕರಣದಲ್ಲಿ ರಾಂಗ್ ರೂಟ್ನಲ್ಲಿ ಬಂದ ಹಾಲಿನ ಲಾರಿಯೇ ಮುಖ್ಯ ದೋಷಿ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಲಾರಿ ಚಾಲಕ ಮಿಲ್ಕ್ ಟ್ಯಾಂಕರ್ ಅನ್ನು ರಾಂಗ್ ರೂಟ್ನಲ್ಲಿ ತಂದಿದ್ದರಿಂದ ಟೆಂಪೊ ಹಾಲಿನ ಲಾರಿ, ಸರ್ಕಾರಿ ಬಸ್ಗೆ ಡಿಕ್ಕಿ ಹೊಡೆಯಿತು. ಜಿಗ್-ಜಾಗ್ ರೀತಿಯಲ್ಲಿ ಟೆಂಪೊದ ಹಿಂದೆ ಮತ್ತು ಮುಂದೆ ಹಾನಿಯಾಯಿತು. ಹೀಗಾಗಿಯೇ ಸಾವಿನ ಸಂಖ್ಯೆ ಹೆಚ್ಚಾಯಿತು. ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ಹಾಗೂ ಟೆಂಪೊ ಡಿಕ್ಕಿಯಾಗಿದ್ದರಿಂದ ಬಸ್ನಲ್ಲಿದ್ದ ಹಲವರಿಗೂ ಗಾಯಗಳಾಗಿವೆ ಎಂದು ಬಸ್ನಲ್ಲಿದ್ದ ಪ್ರಯಾಣಿಕ ಮತ್ತು ಅಪಘಾತದ ಪ್ರತ್ಯಕ್ಷದರ್ಶಿಗಳು ಖಾಸಗಿ ಟಿವಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಅಪಘಾತಕ್ಕೀಡಾದ ಟಿಟಿ ವಾಹನದಲ್ಲಿ ಒಟ್ಟು 16 ಮಂದಿ ಪ್ರಯಾಣಿಸುತ್ತಿದ್ದರು. ನಿನ್ನೆ ರಾತ್ರಿ 10.50 ರ ವೇಳೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದರು.
ಅರಸೀಕೆರೆ ಶವಾಗಾರದ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ನಾಲ್ವರು ಪುಟ್ಟ ಮಕ್ಕಳು ಮೃತಪಟ್ಟಿರುವುದು ಎಂಥವರ ಮನಸ್ಸನ್ನೂ ಕರಗಿಸುತ್ತಿದೆ. ಪುಟ್ಟ ಮಕ್ಕಳ ಮೃತದೇಹ ಕಂಡವರು ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ. ನಿನ್ನೆ-ಮೊನ್ನೆಯವರೆಗೂ ಮನೆಯಂಗಳದಲ್ಲಿ ಆಡಿಕೊಂಡಿದ್ದ ಪುಟಾಣಿಗಳು ಎರಡು ದಿನಗಳ ಹಿಂದಷ್ಟೇ ಹಬ್ಬ ಮುಗಿಸಿ ಧರ್ಮಸ್ಥಳಕ್ಕೆ ಹೋಗಿದ್ದರು. ಈಗ ನೋಡಿದರೆ ಹೆಣಗವಾಗಿ ವಾಪಸ್ ಬಂದಿದ್ದಾರೆ ಎಂದು ಸಂಬಂಧಿಕರು ಒಂದೇ ಸಮನೆ ಅಳುತ್ತಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ 9 ಜನರ ಪೈಕಿ 7 ಮಂದಿ ಸಾಲಾಪುರ ಗ್ರಾಮಕ್ಕೆ ಸೇರಿದವರು. ಇತರ ಇಬ್ಬರು ದೊಡ್ಡೇನಹಳ್ಳಿ ಗ್ರಾಮದವರು. ಧರ್ಮಸ್ಥಳ, ಸುಬ್ರಹ್ಮಣ್ಯ, ಹಾಸನಾಂಬೆ ದರ್ಶನ ಮುಗಿಸಿ ವಾಪಸ್ ಊರಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ದೊಡ್ಡೇನಹಳ್ಳಿಯ ಮಕ್ಕಳಾದ ಧ್ರುವ (2) ಹಾಗೂ ತನ್ಮಯ್ (10), ಸಾಲಾಪುರದ ಲೀಲಾವತಿ (50), ಚೈತ್ರಾ (33), ಸಮರ್ಥ (10) ಡಿಂಪಿ (12), ವಂದನಾ (20), ದೊಡ್ಡಯ್ಯ (60), ಭಾರತಿ (50) ಮೃತರು.
ದಸರಾ ರಜೆಯ ಹಿನ್ನೆಲೆಯಲ್ಲಿ ಅಣ್ಣ-ತಮ್ಮಂದಿರ ಕುಟುಂಬದ ಸದಸ್ಯರು ಒಂದೇ ವಾಹನದಲ್ಲಿ ಧಾರ್ಮಿಕ ಪ್ರವಾಸ ಹೋಗಿಧ್ದರು. ಅಪಘಾತದಲ್ಲಿ ದೊಡ್ಡಯ್ಯ ಹಾಗೂ ಪತ್ನಿ ಭಾರತಿ ಮೃತಪಟ್ಟಿದ್ದಾರೆ. ದೊಡ್ಡಯ್ಯ ಅವರ ಸಹೋದರ ರಮೇಶ್, ಅವರ ಪತ್ನಿ ಲೀಲಾವತಿ ಮತ್ತು ಮೊಮ್ಮಕ್ಕಳಾದ ಧ್ರುವ ಮತ್ತು ತನ್ಮಯ್ ಸಹ ಮೃತಪಟ್ಟಿದ್ದಾರೆ. ಈ ಇಬ್ಬರೂ ಮಕ್ಕಳ ತಾಯಿ ಮಂಜುಳಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಟಿಟಿ ವಾಹನ ಚಲಾಯಿಸುತ್ತಿದ್ದ ದೊಡ್ಡಯ್ಯ ಅವರ ಪುತ್ರ ಶಶಿಕುಮಾರ್ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ.
ದೊಡ್ಡಯ್ಯ ಅವರ ಮತ್ತೊಬ್ಬ ಸಹೋದರ ಕುಮಾರಸ್ವಾಮಿ ಅವರ ಪುತ್ರಿ ಚೈತ್ರಾ ಮತ್ತು ಚೈತ್ರಾ ಅವರ ಮಕ್ಕಳಾದ ಸಮರ್ಥ ಎಸ್.ರಾಯ್ ಮತ್ತು ಸೃಷ್ಟಿ ಕೂಡ ಸಾವನ್ನಪ್ಪಿದ್ದಾರೆ. ಕುಮಾರಸ್ವಾಮಿ ಅವರ ಬಾವಮೈದುನನ ಮಗಳು ವಂದನಾ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಸಾಲಾಪುರದ ಏಳು ಹಾಗೂ ದೊಡ್ಡೇನಹಳ್ಳಿಯ ಇಬ್ಬರು ಸೇರಿದ್ದಾರೆ. ರಮೇಶ್ ಪುತ್ರಿ ಮಂಜುಳಾರನ್ನು ದೊಡ್ಡೇನಹಳ್ಳಿಯ ಸಂತೋಷ ಜೊತೆ ಮದುವೆ ಮಾಡಿಕೊಡಲಾಗಿತ್ತು.
ತಾಯಿ ಜೊತೆ ಮಕ್ಕಳೊಂದಿಗೆ ಧಾರ್ಮಿಕ ಕ್ಷೇತ್ರದ ದರ್ಶನಕ್ಕೆ ಮಂಜುಳಾ ತೆರಳಿದ್ದರು. ಅಪಘಾತದಲ್ಲಿ ಮಂಜುಳಾರ ತಾಯಿ ಹಾಗೂ ಮಕ್ಕಳು ಸಾವನ್ನಪ್ಪಿದ್ದಾರೆ. ಕುಮಾರಸ್ವಾಮಿ ಪುತ್ರಿ ಚೈತ್ರಾ ಅವರ ಪತಿ ಶ್ರೀನಿವಾಸ್ ಎರಡು ವರ್ಷಗಳ ಹಿಂದಷ್ಟೇ ಕೊವಿಡ್ನಿಂದ ಮೃತಪಟ್ಟಿದ್ದರು. ಸಾರಿಗೆ ಇಲಾಖೆಯಲ್ಲಿ ಶ್ರೀನಿವಾಸ್ ಅವರ ಕೆಲಸವನ್ನು ಅನುಕಂಪದ ಆಧಾರದ ಮೇಲೆ ಚೈತ್ರಾ ಅವರಿಗೆ ಕೊಡಲಾಗಿತ್ತು. ಮುಂದಿನ ವಾರ ಅವರು ಕೆಲಸಕ್ಕೆ ಹಾಜರಾಗಬೇಕಿತ್ತು. ಆದರೆ ಅದಕ್ಕೆ ಮೊದಲೇ ಮಕ್ಕಳ ಸಹಿತ ಮೃತಪಟ್ಟಿದ್ದಾರೆ.