ಸಮಗ್ರ ನ್ಯೂಸ್: ಜಮ್ಮುವಿನ ಅನಂತ್‌ನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರನ್ನು ತಟಸ್ಥಗೊಳಿಸುವ ಕಾರ್ಯಾಚರಣೆಯ ವೇಳೆ ದಿಟ್ಟ ಹೋರಾಟ ತೋರಿದ್ದ ಸೇನಾ ಶ್ವಾನ ಜೂಮ್ ಗುರುವಾರ ಮಧ್ಯಾಹ್ನ ನಿಧನವಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಕಾರ್ಯಾಚರಣೆಯ ವೇಳೆ ಭಯೋತ್ಪಾದಕರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಜೂಮ್, ಈ ವೇಳೆ ಎರಡು ಗುಂಡೇಟು ತಿಂದಿತ್ತು.
ಹಾಗಿದ್ದರೂ ಭಾರತೀಯ ಸೇನೆಯ ಶ್ವಾನದ ಸಹಾಯದಿಂದಲೇ ಭಯೋತ್ಪಾದಕರನ್ನು ಸಾಯಿಸಲು ಯಶಸ್ವುಯಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಶ್ವಾನವನ್ನು 54 ಅಡ್ವಾನ್ಸ್ ಫೀಲ್ಡ್ ವೆಟರ್ನರಿ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಗುರುವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಜೂಮ್ ಕೊನೆಯುಸಿರೆಳೆದಿದೆ. 11.45ರ ವೇಳೆಗೆ ಶ್ವಾನ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದನೆ ಮಾಡುತ್ತಿತ್ತು. ಆದರೆ, ಇದ್ದಕ್ಕಿದ್ದಂತೆ ಉಸಿರುಗಟ್ಟಿದಂತಾಗಿ ಸಾವು ಕಂಡಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಅನಂತನಾಗ್‌ನ ಕೋಕರ್‌ನಾಗ್‌ನಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ, ‘ಜೂಮ್’ ಭಯೋತ್ಪಾದಕರ ಮೇಲೆ ದಾಳಿ ಮಾಡಿತ್ತು. ಈ ವೇಳೆ ಎರಡು ಗಂಭೀರ ಪ್ರಮಾಣದ ಗುಂಡಿನೇಟು ಪಡೆದಿತ್ತು ಎಂದು ಚಿನಾರ್ ಕಾರ್ಪ್ಸ್ ಕೆಲ ದಿನಗಳ ಹಿಂದೆ ಟ್ವಿಟರ್‌ನಲ್ಲಿ ತಿಳಿಸಿತ್ತು.
ಗುಂಡೇಟು ಬಿದ್ದ ನಡುವೆಯೂ ಜೂಮ್ ತನ್ನ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಭಯೋತ್ಪಾದಕರನ್ನು ತಟಸ್ಥಗೊಳಿಸಿತ್ತು ಎಂದು ಭಾರತೀಯ ಸೇನೆ ಬರೆದುಕೊಂಡಿತ್ತು. ಸೇನಾ ನಾಯಿಯು ಆಪರೇಷನ್ ಟ್ಯಾಂಗ್‌ಪಾವಾಸ್‌ನ ವಾರ್ ಟೀಮ್‌ನ ಭಾಗವಾಗಿತ್ತು. ಅನಂತ್‌ನಾಗ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಹತರಾಗಿದ್ದರು. ಎನ್‌ಕೌಂಟರ್‌ನಲ್ಲಿ ‘ಜೂಮ್’ ಜೊತೆಗೆ ಇಬ್ಬರು ಸೈನಿಕರೂ ಗಾಯಗೊಂಡಿದ್ದರು.