ಸಮಗ್ರ ನ್ಯೂಸ್: ಪ್ಯಾಕೇಜ್ ಟೂರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ವಿಭಾಗದ ಕೆಎಸ್‌ಆರ್‌ಟಿಸಿಯಿಂದ ಸದ್ಯದ ಮಟ್ಟಿಗೆ 5-10 ಬಸ್ಸುಗಳನ್ನು ಬಿಡಲಾಗುತ್ತಿದೆ. ವೀಕೆಂಡ್‌ಗಳಲ್ಲಿ ದಕ್ಷಿಣ ಕನ್ನಡದ ಪ್ರಮುಖ ದೇವಸ್ಥಾನಗಳ ದರ್ಶನವಾಗುವಂತೆ ಪ್ಯಾಕೇಜ್ ಟೂರ್‌ಗಳನ್ನು ರೂಪಿಸಲಾಗಿದೆ.
ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ ಚಂದ್ರಪ್ಪ ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದರು. ದಸರಾ ಸಂದರ್ಭದಲ್ಲೂ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಟೂರ್ ಆಯೋಜಿಸಿತ್ತು. ತಕ್ಕಮಟ್ಟಿಗೆ ಯಶಸ್ವಿಯೂ ಆಗಿತ್ತು. ಈ ಹಿನ್ನೆಲೆಯಲ್ಲಿ ದಿಪಾವಳಿಗೂ ಪ್ಯಾಕೇಜ್ ಟೂರ್ ಹಾಕಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಸದ್ಯಕ್ಕೆ 5-10 ಬಸ್ಸುಗಳನ್ನು ವೀಕೆಂಡ್ ಪ್ರವಾಸ ಯೋಜನೆಗೆ ಬಳಸಲಾಗುತ್ತದೆಯಾದರೂ ಜನರ ಬೇಡಿಕೆ ಹೆಚ್ಚಿದಂತೆ ಇನ್ನಷ್ಟು ಬಸ್ಸುಗಳನ್ನು ಇದಕ್ಕಾಗಿ ವಿನಿಯೋಗಿಸುವುದಾಗಿ ಕೆಎಸ್ಸಾರ್ಟಿಸಿ ಮುಖ್ಯಸ್ಥರು ತಿಳಿಸಿದ್ದಾರೆ.
ಅಕ್ಟೋಬರ್ 21ರಿಂದ 27ರವರೆಗೂ ದೀಪಾವಳಿ ಪ್ರವಾಸ ಪ್ಯಾಕೇಜ್ ಇರಲಿದೆ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮೊದಲಾದ ಪ್ರಮುಖ ಸ್ಥಳಗಳನ್ನು ಟೂರ್ ಪ್ಯಾಕೇಜ್‌ನಲ್ಲಿ ಒಳಗೊಳ್ಳಲಾಗಿದೆ.
ಕೆಎಸ್‌ಆರ್‌ಟಿಸಿ ಒಟ್ಟು 300 ಎಲೆಕ್ಟ್ರಿಕ್ ಬಸ್ಸುಗಳ ಖರೀದಿಗೆ ಸರಕಾರದ ಮುಂದೆ ಪ್ರಸ್ತಾನ ಇಟ್ಟಿದೆ. ಆದರೆ, ಇನ್ನೂ ಅನುಮೋದನೆ ಸಿಕ್ಕಿಲ್ಲ. ಈಗ ಖರೀದಿಸಲಾಗಿರುವ 650 ಬಸ್ಸುಗಳಲ್ಲಿ 50 ಎಲೆಕ್ಟ್ರಿಕ್ ಬಸ್ಸುಗಳಿವೆ. ಈ ವಿದ್ಯುತ್ ಚಾಲಿತ ವಾಹನಗಳು 15 ದಿನದಲ್ಲಿ ಆಗಮಿಸಲಿದ್ದು, ಬೆಂಗಳೂರು-ಮಂಗಳೂರು ಇತ್ಯಾದಿ ದೂರ ಮಾರ್ಗಗಳಿಗೆ ಬಿಡಲಾಗುವುದು ಎಂದು ಅವರು ಹೇಳಿದ್ದಾರೆ.