ಬೆಂಗಳೂರು: ವಿದ್ಯಾರ್ಥಿಗಳ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದ ಎರಡು ದಂತ ವೈದ್ಯಕೀಯ ಕಾಲೇಜುಗಳಿಗೆ ನ್ಯಾಯಾಲಯದ ಸಮಯ ವ್ಯರ್ಥ ಮಾಡಿರುವುದಕ್ಕಾಗಿ ಕರ್ನಾಟಕ ಹೈಕೋರ್ಟ್ ತಲಾ ರೂ 1 ಲಕ್ಷ ದಂಡ ವಿಧಿಸಿದೆ.
“ವಿದ್ಯಾರ್ಥಿಗಳು ನಿಜವಾಗಿಯೂ ಅರ್ಹರಾಗಿದ್ದು ಸೀಟುಗಳಿಂದ ವಂಚಿತರಾಗಿದ್ದರೆ, ಅವರೇ ಸ್ವತಂತ್ರವಾಗಿ ನ್ಯಾಯಾಲಯದ ಮೊರೆ ಹೋಗಬಹುದು. ಆದರೆ, ವಿದ್ಯಾರ್ಥಿಗಳ ಪರವಾಗಿ ಕಾಲೇಜುಗಳು ರಿಟ್ ಅರ್ಜಿಗಳನ್ನು ಸಲ್ಲಿಸುವಂತಿಲ್ಲ’ ಎಂದು ನ್ಯಾಯಾಲಯ ಹೇಳಿದೆ.
ಸುಳ್ಯದ ಕೆವಿಜಿ ಡೆಂಟಲ್ ಕಾಲೇಜು ಮತ್ತು ಬೆಂಗಳೂರಿನ ಶ್ರೀ ವೆಂಕಟೇಶ್ವರ ಡೆಂಟಲ್ ಕಾಲೇಜು ಆರು ವಿದ್ಯಾರ್ಥಿಗಳ ಪರವಾಗಿ ಹೈಕೋರ್ಟ್ ಮೊರೆ ಹೋಗಿದ್ದವು. ಮೇ 2 ಮತ್ತು 3ರಂದು ಬಿಡಿಎಸ್ ಕೋರ್ಸ್‌ಗಳ ಕೌನ್ಸೆಲಿಂಗ್‌ಗೆ ನೋಂದಾಯಿಸಲು ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್‌ಸೈಟ್ ತೆರೆಯುತ್ತಿಲ್ಲ ಎಂದು ಹೈಕೋರ್ಟ್ ಗೆ ಮೊರೆ ಹೋಗಿದ್ದರು.
ಡೆಂಟಲ್ ಕಾಲೇಜಿನಲ್ಲಿ 100 ಸೀಟುಗಳ ಪೈಕಿ ನಾಲ್ಕು ಸೀಟುಗಳು ಖಾಲಿ ಇದ್ದು, ಖಾಲಿ ಸೀಟುಗಳನ್ನು ಭರ್ತಿ ಮಾಡಿಕೊಳ್ಳುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳ ಪರವಾಗಿ ಅರ್ಜಿ ಸಲ್ಲಿಸಿತ್ತು. ಆದರೆ, ಕಾಲೇಜು ತನ್ನ ವೈಯಕ್ತಿಕ ಲಾಭಕ್ಕಾಗಿಯೇ ಹೊರತು ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ ಅರ್ಜಿ ಸಲ್ಲಿಸಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಜಂಟಿ ಅರ್ಜಿದಾರರಾಗಿದ್ದ ವಿದ್ಯಾರ್ಥಿಗಳ ವಿಳಾಸವನ್ನು ಆಯಾ ಕಾಲೇಜುಗಳ ಕೇರ್ ಆಫ್ ಎಂದು ನಮೂದಿಸಿರುವುದನ್ನು ನ್ಯಾಯಾಲಯ ಗಮನಿಸಿದೆ. ತಮ್ಮ ಕಾಲೇಜಿನ ವಿದ್ಯಾರ್ಥಿಗಳಲ್ಲದ ಅಭ್ಯರ್ಥಿಗಳ ಬಗ್ಗೆ ಈ ಕಾಲೇಜುಗಳಿಗೆ ಯಾಕೆ ಕಾಳಜಿ? ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಅರ್ಜಿದಾರ ಕಾಲೇಜುಗಳು ನ್ಯಾಯಾಲಯದಿಂದ ಆದೇಶವನ್ನು ಪಡೆಯುವ ಪರೋಕ್ಷ ವಿಧಾನವನ್ನು ಅಳವಡಿಸಿಕೊ೦ಡಿರುವುದು ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿದೆ.