ಸಮಗ್ರ ನ್ಯೂಸ್: ದಕ್ಷಿಣ ಭಾರತದಲ್ಲಿ ಅಪರೂಪದ ಅಳಿಲು ಪ್ರಭೇದಗಳಲ್ಲಿ ಒಂದಾದ ಟ್ರಾವಂಕೂರು ಹಾರುವ ಅಳಿಲು ಸುಳ್ಯ ತಾಲೂಕಿನಲ್ಲಿ ಪತ್ತೆಯಾಗಿದೆ. ಇವು ನಿಶಾಚರಿ ಆಗಿರುವುದರಿಂದ ಕಾಣಸಿಗುವುದು ಅಪೂರ್ವ. ಪರಿಸರ ಸಂರಕ್ಷಕ ದೀಪಕ್ ಸುಳ್ಯ ಅವರ ತೋಟದಲ್ಲಿ ಈ ಅಳಿಲು ಪತ್ತೆಯಾಗಿದೆ.
ಸ್ಥಳೀಯವಾಗಿ ಇದನ್ನು ದರಗು ಪಾಂಜ, ಚಿಕ್ಕ ಪಾಂಜ ಎಂದು ಕರೆಯುತ್ತಾರೆ. ಪಶ್ಚಿಮಘಟ್ಟದಲ್ಲಿ ಕಂಡುಬರುವ ಅಳಿವಿನಂಚಿನ ಪ್ರಾಣಿ ಪ್ರಭೇದಗಳಲ್ಲಿ ಇದೂ ಒಂದು. ಪಶ್ಚಿಮಘಟ್ಟದಲ್ಲಿ ದೈತ್ಯ ಹಾರುವ ಅಳಿಲು (ಇಂಡಿಯನ್ ಜೈಂಟ್) ಮತ್ತು ಟ್ರಾವಂಕೂರು ಹಾರುವ ಅಳಿಲು ಎಂಬ ಎರಡು ಪ್ರಭೇದಗಳಿವೆ.
ಈ ಪ್ರಾಣಿ ಪ್ರಭೇದಗಳು ನಾಶವಾಗಿದೆ ಎಂದು ಜೀವವೈವಿಧ್ಯ ಸಂಶೋಧಕರು ಉಲ್ಲೇಖಿಸಿದ್ದರು. ಆದರೆ ದಶಕದ ಹಿಂದೆ ಕೇರಳದ ಪಶ್ಚಿಮಘಟ್ಟದಲ್ಲಿ ಈ ಪ್ರಭೇದ ಪತ್ತೆಯಾಗಿದ್ದು, ಪ್ರಸ್ತುತ ಅಳಿವಿನಂಚಿನದ್ದು ಎಂದು ಗುರುತಿಸಲಾಗಿದೆ. ಸುಳ್ಯದಲ್ಲಿ ಪತ್ತೆಯಾದ ಅಳಿಲು ಪ್ರಸ್ತುತ ದಕ್ಷಿಣ ಏಷ್ಯಾದ ಅತ್ಯಂತ ಚಿಕ್ಕ ಹಾರುವ ಅಳಿಲು ಜಾತಿಗಳಲ್ಲಿ ಒಂದು. 32 ಸೆಂ.ಮೀ ಉದ್ದ ಇರುತ್ತದೆ ಎಂದು ಜೀವವೈವಿಧ್ಯ ಸಂಶೋಧಕ ಪ್ರೊ. ಪ್ರಶಾಂತ್ ನಾಕ್ ಬೈಂದೂರು ತಿಳಿಸಿದ್ದಾರೆ.