ಸಮಗ್ರ ನ್ಯೂಸ್: ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಆದೇಶ ಪ್ರತಿಯಲ್ಲಿ ಟಿಪ್ಪು ಎಕ್ಸ್‌ಪ್ರೆಸ್ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ಎಂದು ನಾಮಕರಣ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಹಲವು ದಿನಗಳಿಂದ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಿಸಿ ಎಂಬ ಒತ್ತಾಯ ಕೇಳಿ ಬಂದಿತ್ತು.
ಈ ಸಂಬಂಧ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದರು. ದೆಹಲಿಯಲ್ಲಿ ಭೇಟಿಯಾಗಿ ಸಂಸದರು ಲಿಖಿತ ಮನವಿ ಕೂಡ ಸಲ್ಲಿಸಿದ್ದರು. ಮೈಸೂರಿಗೆ ರೈಲು ಸೇವೆ ಕಲ್ಪಿಸುವಲ್ಲಿ ಮಹಾರಾಜರ ಕೊಡುಗೆ ಅಪಾರ. ಹೀಗಾಗಿ ಒಡೆಯರ್ ಎಕ್ಸ್‌ಪ್ರೆಸ್ ಎಂದು ಹೆಸರಿಡಬೇಕು ಎಂದು ಒತ್ತಾಯಿಸಿದ್ದರು.
ಇನ್ನು, ರಾಜ ವಂಶಸ್ಥ ಯದುವೀರ್ ಒಡೆಯರ್, ಟಿಪ್ಪು ಎಕ್ಸ್‌ಪ್ರೆಸ್ ರೈಲ್ವೆ ಮರು ನಾಮಕರಣದ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾವಣೆ ಮಾಡಿ ಒಡೆಯರ್ ಹೆಸರಿಟ್ಟರೆ ಒಳ್ಳೆಯದು. ಆದರೆ ಹೆಸರು ಬದಲಾವಣೆ ಮಾಡುವುದು ಸರ್ಕಾರಕ್ಕೆ ಬಿಟ್ಟ ವಿಷಯ, ಒಡೆಯರ್ ಎಂದು ಬದಲಾಯಿಸಿದರೆ ಒಳ್ಳೆಯದು ಎಂಬುದು ನನ್ನ ಅನಿಸಿಕೆ ಎಂದಿದ್ದರು.