ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣವು ಇಡೀ ರಾಜ್ಯ ರಾಜಕೀಯವನ್ನೇ ತಲ್ಲಣಗೊಳಿಸಿದ ಸುದ್ದಿ. ಇದರ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು, ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಯವರಿಗೆ ಕ್ಲೀನ್ ಚಿಟ್ ನೀಡಲು ಮುಂದಾಗಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.
ಪ್ರಕರಣ ಸಂಬಂಧ ಆರಂಭವಾಗಿದ್ದ ತನಿಖೆ ಪೂರ್ಣಗೊಂಡಿದೆ. ಜಾರಕಿಹೊಳಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ. ಮಹಿಳೆಯೇ ಪದೇ ಪದೇ ಜಾರಕಿಹೊಳಿಯವರನ್ನು ಸಂಪರ್ಕಿಸಿದ್ದಾರೆ. ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿ ಪ್ರಚೋದನೆ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ. ಲಭ್ಯವಾಗಿರುವ ವಿಡಿಯೋದಲ್ಲಿ ಮಹಿಳೆಗೆ ಬಲವಂತ ಮಾಡಿರುವ, ದೌರ್ಜನ್ಯ ಎಸಗಿರುವ ಯಾವುದೇ ದೃಶ್ಯಗಳೂ ಕಂಡು ಬಂದಿಲ್ಲ. ಇಬ್ಬರ ಸಹಮತದಿಂದಲೇ ಕ್ರಿಯೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎಲ್ಲಾ ಬೆಳವಣಿಗೆ ಬಳಿಕ ಜಾರಕಿಹೊಳಿಯವರು ಹನಿ ಟ್ರ್ಯಾಪ್’ಗೆ ಒಳಗಾಗಿದ್ದಾರೆಂದು ಹೇಳಲಾಗುತ್ತಿದ್ದು, ಈ ಸಂಬಂಧ ಎಸ್ಐಟಿ ಅಧಿಕಾರಿಗಳೂ ನ್ಯಾಯಾಲಯಕ್ಕೆ ಶೀಘ್ರದಲ್ಲಿಯೇ ಬಿ ರಿಪೋರ್ಟ್ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ.
ಮಾರ್ಚ್ 26 ರಂದು ಮಹಿಳೆ ಪ್ರಕರಣ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ವಿರುದ್ಧ 376 ಸಿ (ಅಧಿಕಾರದಲ್ಲಿದ್ದ ವ್ಯಕ್ತಿಯು ಲೈಂಗಿಕ ಸಂಭೋಗ), 354 ಎ (ಲೈಂಗಿಕ ಕಿರುಕುಳ), 504 (ಶಾಂತಿ ಪ್ರಚೋದನೆ), 506 (ಕ್ರಿಮಿನಲ್ ಬೆದರಿಕೆ), ಐಪಿಸಿಯ 417 (ಮೋಸ) ಮತ್ತು 67 ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.