ಸಮಗ್ರ ನ್ಯೂಸ್: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯಾಗಿರುವ ಜಂಬೂ ಸವಾರಿಯು ವಿಜಯದಶಮಿಯ ದಿನವಾದ ನಾಳೆ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿದೆ.
ಇಂದು ನಾಡಿನಲ್ಲೆಡೆ ಆಯುಧ ಪೂಜೆ ನಡೆಯುತ್ತಿದ್ದು, ವಿಜಯದಶಮಿ ಅಂಗವಾಗಿ ನಾಳೆ ಮೈಸೂರಿನಲ್ಲಿ ವೈಭವದ ಜಂಬೂ ಸವಾರಿ ಆರಂಭವಾಗಲಿದೆ. ಬುಧವಾರ ಮಧ್ಯಾಹ್ನ 2: 36 ರಿಂದ 2:50 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ನಂದಿದ್ವಜ ಪೂಜೆ ನಡೆಯಲಿದ್ದು, ಬಳಿಕ ವಿಜಯದಶಮಿ ಮೆರವಣಿಗೆ ಆರಂಭವಾಗಲಿದೆ.
ದೇವಿ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಪ್ರತಿಷ್ಠಾಪನೆ ಮಾಡಿದ ಬಳಿಕ ಉತ್ಸವ ಮೂರ್ತಿಗೆ ಸಂಜೆ 5:07 ರಿಂದ 5:18ರ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ಮಾಡಲಿದ್ದಾರೆ. ಜಂಬೂಸವಾರಿಯಲ್ಲಿ 9 ರಿಂದ 10 ಆನೆಗಳು ಪಾಲ್ಗೊಳ್ಳಲಿದ್ದು, 50ಕ್ಕೂ ಹೆಚ್ಚು ಕಲಾತಂಡಗಳು ಇದಕ್ಕೆ ಮತ್ತಷ್ಟು ಮೆರಗು ನೀಡಲಿವೆ.
ಅಂಬಾರಿಯನ್ನು ಆನೆ ಅಭಿಮನ್ಯು ಹೊರಲಿದ್ದು, ಚೈತ್ರ ಹಾಗೂ ಕಾವೇರಿ ಕುಮ್ಕಿ ಆನೆಗಳಾಗಲಿವೆ. ಅರ್ಜುನ ನಿಶಾನೆಯಾದರೆ, ನೌಪತ್ ಆನೆಯಾಗಿ ಮಹೇಂದ್ರ, ಸಾಲಾನೆಯಾಗಿ ಭೀಮ, ಗೋಪಾಲಸ್ವಾಮಿ, ಧನಂಜಯ್ ಹಾಗೂ ಗೋಪಿ ಹೆಜ್ಜೆ ಹಾಕಲಿದ್ದು ಕೊನೆಗಳಿಗೆಯಲ್ಲಿ ವಿಜಯ ಕೂಡ ತಂಡ ಸೇರಬಹುದು ಎಂದು ಹೇಳಲಾಗಿದೆ.