ಇಂಗ್ಲಿಷ್ ಸಾಹಿತ್ಯ ಲೋಕದ ಖ್ಯಾತ ಕವಿ ವಿಲಿಯಂ ಶೇಕ್ಸ್‌ಪಿಯರ್ ಎರಡು ದಿನದ ಹಿಂದೆ ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಿ ಅರ್ಜೆಂಟೈನಾದ ಸುದ್ದಿವಾಹಿನಿಯೊಂದರಲ್ಲಿ ವರದಿಯಾಗಿದೆ. ಬರೋಬ್ಬರಿ ನಾಲ್ಕು ಶತಮಾನಗಳ ಮೃತಪಟ್ಟಿದ್ದ ಶೇಕ್ಸ್ ಪಿಯರ್ ಈಗ ಸಾಯಲು ಮತ್ತೆ ಹುಟ್ಟಿದ್ದಾದರು ಯಾವಾಗ ಎಂದಿರುವ ವೀಕ್ಷಕರ ನಗೆಪಾಟಲಿಗೆ ಸುದ್ದಿವಾಹಿನಿ ಗುರಿಯಾಗಿದೆ.
ಇಷ್ಟಕ್ಕೂ ಈ ರೀತಿ ಸುದ್ದಿಯಾಗಲು ಕಾರಣವಿದೆ. ಫೈಜರ್ ಸಂಸ್ಥೆಯಿಂದ ಲಸಿಕೆ ಪಡೆದ ವಿಶ್ವದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದ ವಿಲಿಯಮ್ ಶೇಕ್ಸ್‌ಪಿಯರ್ ಎಂಬ ವ್ಯಕ್ತಿ ಇಂಗ್ಲೆಂಡ್‌ನಲ್ಲಿ ಎರಡು ದಿನದ ಹಿಂದೆ ನಿಧನರಾಗಿದ್ದರು. ಕೊರೊನಾ ಲಸಿಕೆ ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವಿಲಿಯಂ ಶೇಕ್ಸ್‌ಪಿಯರ್ (81) ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ತಪ್ಪಾಗಿ ಗ್ರಹಿಸಿಕೊಂಡ ಸುದ್ದಿವಾಹಿನಿ, ಇಂಗ್ಲಿಷ್ ಸಾಹಿತ್ಯ ಲೋಕದ ದಿಗ್ಗಜ ವಿಲಿಯಂ ಶೇಕ್ಸ್‌ಪಿಯರ್ ಅವರೇ ನಿಧನರಾಗಿದ್ದಾರೆ ಎಂದು ಸುದ್ದಿ ಬಿತ್ತರಿಸಿತ್ತು. ಅಷ್ಟೇ ಅಲ್ಲದೆ ವಿಶ್ವದಲ್ಲೇ ಮೊದಲು ಕೊರೊನಾ ಲಸಿಕೆ ಪಡೆದಿದ್ದ ವಿಲಿಯಂ ಶೇಕ್ಸ್‌ಪಿಯರ್ ನಿಧನರಾಗಿದ್ದಾರೆ. ಅವರ ಸಾವು ನಮ್ಮನ್ನೆಲ್ಲಾ ದಿಗ್ಭ್ರಾಂತರನ್ನಾಗಿಸಿದೆ. ಎಲ್ಲರೂ ತಿಳಿದಂತೆ ಶೇಕ್ಸ್‌ಪಿಯರ್ ಇಂಗ್ಲಿಷ್ ಸಾಹಿತ್ಯ ಲೋಕದ ಪ್ರಮುಖ ಬರಹಗಾರರಾಗಿದ್ದಾರೆ, ನನಗೆ ಅವರು ಮಾಸ್ಟರ್ ಇದ್ದಂತೆ 81 ವರ್ಷವಾಗಿದ್ದ ಇವರಿಗೆ ಇಂಗ್ಲೆಂಡ್‌ನಲ್ಲಿ ಮೊದಲ ಲಸಿಕೆ ನೀಡಲಾಗಿತ್ತು ಎಂದು ಆಂಕರ್ ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕವಿ, ಸಾಹಿತಿ ಶೇಕ್ಸ್‌ಪಿಯರ್ 1616ರಲ್ಲೇ ನಿಧನಾರಗಿದ್ದು, ಈ ವಿಚಾರವನ್ನು ತಿಳಿದುಕೊಳ್ಳದೆ ಪತ್ರಕರ್ತೆ ಮಾಡಿದ ಎಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.