ಸಮಗ್ರ ನ್ಯೂಸ್: ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ‘ಕಾಂತಾರ’ ಸಪ್ಟೆಂಬರ್ 30 ರಂದು ತೆರೆ ಕಂಡಿದ್ದು, ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಹುತೇಕ ಸಿನಿಪ್ರಿಯರು ಪ್ರೀಮಿಯರ್ ಶೋ ಹಾಗೂ ಫಸ್ಟ್ ಡೇ ಶೋಗಳನ್ನೇ ನೋಡಿದ್ದು, ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ವಿಶ್ವದಾದ್ಯಂತ ತೆರೆ ಕಂಡಿರುವ ‘ಕಾಂತಾರಾ’ ಚಿತ್ರಕ್ಕೆ ಮನಸೋಲದವರೆ ಇಲ್ಲ. ಕರಾವಳಿಯ ಭಾಗಗಳಿಗೆ ಮೀಸಲಾಗಿದ್ದ ಕಂಬಳ ಮತ್ತು ಭೂತ ಕೋಲದ ಸಾಂಪ್ರದಾಯಿಕ ಸಂಸ್ಕೃತಿ ‘ಕಾಂತಾರ’ ಮೂಲಕ ದೇಶದ ಮೂಲೆ ಮೂಲೆಯಲ್ಲೂ ಮಾರ್ಧನಿಸುತ್ತಿದ್ದು, ಕೇವಲ ಸ್ಯಾಂಡಲ್‌ವುಡ್ ಮಾತ್ರವಲ್ಲ ಭಾರತೀಯ ಚಿತ್ರರಂಗದ ಅನೇಕ ನಟ-ನಟಿಯರು ಕಾಂತಾರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರತಿಬಾರಿಯೂ ಕನ್ನಡ ಚಿತ್ರರಂಗಕ್ಕೆ ಅತ್ಯದ್ಭುತ ಚಿತ್ರಗಳನ್ನು ನೀಡುವ ಹೊಂಬಾಳೆ ಫಿಲ್ಮ್ಸ್ ಈ ಬಾರಿಯೂ ಬಂಗಾರದ ಬೆಳೆ ತೆಗೆಯುವುದರಲ್ಲಿ ಎರಡು ಮಾತಿಲ್ಲ. ಹೊಂಬಾಳೆ ಫಿಲ್ಮ್ಸ್ ನಿರ್ಮಾದಲ್ಲಿ ಅದ್ಧೂರಿಯಾಗಿ ಮೂಡಿಬಂದಿರುವ ಕಾಂತಾರ ಚಿತ್ರಕ್ಕೆ ಮನಸೋಲದವರಿಲ್ಲ. ಇನ್ನು ರಿಷಬ್ ಶೆಟ್ಟಿ ಎಲ್ಲರ ಹೊಗಳಿಕೆ ಪಾತ್ರರಾಗಿದ್ದಾರೆ. ರಿಷಬ್ ಶೆಟ್ಟಿ ತಾವೇ ರಚಿಸಿ, ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯವನ್ನು ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರು ಕೊಂಡಿದ್ದಾರೆ.
‘ಕಾಂತಾರ’ದ ಕ್ಲೈಮಾಕ್ಸ್ ಒಬ್ಬ ಪ್ರೇಕ್ಷಕನನ್ನು ಎಷ್ಟರ ಮಟ್ಟಿಗೆ ಆವರಿಸಿಕೊಳ್ಳುತ್ತದೆ ಎನ್ನುವುದಕ್ಕೆ ಮಂಗಳೂರಿನಲ್ಲಿ ನಡೆದ ವಿಶೇಷ ಘಟನೆಯೊಂದು ಸಾಕ್ಷಿಯಾಗಿದೆ. ಮಂಗಳೂರಿನ ಪಿವಿಆರ್ ಚಿತ್ರಮಂದಿರದಲ್ಲಿ ಶುಕ್ರವಾರ ನಾಲ್ಕನೇ ಶೋನಲ್ಲಿ ‘ಕಾಂತಾರ’ ಸಿನಿಮಾ ವೀಕ್ಷಿಸುತ್ತಿದ್ದ ಪ್ರೇಕ್ಷಕನ ಮೈ ಮೇಲೆ ದೈವ ಆವಾಹನೆ ಆಗಿದೆ. ಸಿನಿಮಾ ನೋಡುತ್ತಿದ್ದ ವ್ಯಕ್ತಿ ಏಕಾಏಕಿ ದೈವ ಆವಾಹನೆ ಆದಂತೆ ವರ್ತಿಸಿದ್ದು, ಸ್ಥಳದಲ್ಲಿದ್ದವರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಪ್ರೇಕ್ಷನ ವರ್ತನೆ ಕಂಡು ಜನ ಗಾಬರಿಗೊಂಡಿದ್ದಾರೆ. ಈ ವೇಳೆ ಕೂಡಲೇ ಸಿನಿಮಾವನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು 10 ನಿಮಿಷದ ಬಳಿಕ ವ್ಯಕ್ತಿ ಚೇತರಿಸಿಕೊಂಡಿದ್ದು ಮತ್ತೆ ಸಿನಿಮಾ ಮುಂದುವರಿಸಲಾಗಿದೆ.
‘ಕಾಂತಾರ’ ಸಿನಿಮಾದಲ್ಲಿ ಕರಾವಳಿ ಭಾಗದ ಕಂಬಳ ಹಾಗೂ ಭೂತಾರಾಧನೆಯನ್ನು ಹೈಲೈಟ್ ಮಾಡಲಾಗಿದೆ. ಅಲ್ಲದೇ ರಿಷಬ್ ಶೆಟ್ಟಿ ಭೂತಾರಾಧನೆ ವೇಷಭೂಷಣದಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಈ ವೇಷಭೂಷಣದಲ್ಲಿ ರಿಷಬ್ ಆಕರ್ಷಿಣೀಯವಾಗಿ ಕಾಣಿಸಿಕೊಂಡಿದ್ದು, ಕರಾವಳಿಯ ಪವಿತ್ರ ಆರಾಧನೆ ಭೂತಾರಾಧನೆಯ ಚಿತ್ರೀರಣದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರಿಗೆ ಸಹ ವಿಶೇಷ ಅನುಭವವಾಗಿದೆ. ಚಿತ್ರದ ಕ್ಲೈಮಾಕ್ಸ್‌ನಲ್ಲಿ ರಿಷಬ್ ಶೆಟ್ಟಿ ತಮ್ಮನ್ನೇ ತಾವು ಮರೆತು ನಟಿಸಿ ಜನರ ಮನಸ್ಸು ಮುಟ್ಟಿದ್ದಾರೆ.