ಸಮಗ್ರ ನ್ಯೂಸ್: ಪಕ್ಷಿಗಳಲ್ಲಿ ಮನುಷ್ಯನಿಗೆ ಅತ್ಯಂತ ಹತ್ತಿರವಾದ ಸಂಬಂಧ ಇರುವ ಪಕ್ಷಿ ಎಂದರೆ ಅದು ಕಾಗೆ. ಮನುಷ್ಯನಿಂದ ಗೌರವ ಹಾಗೂ ಅತೀ ಅವಮಾನಕ್ಕೆ ಒಳಗಾಗುವ ಪಕ್ಷಿ ಕೂಡಾ ಇದೇ ಕಾಗೆಯೇ ಆಗಿದೆ. ಹಿಂದೂ ಸಂಪ್ರದಾಯದ ಪ್ರಕಾರ, ಪಿತೃಪಕ್ಷದಲ್ಲಿ ಕಾಗೆಗೆ ವಿಶೇಷವಾದ ಗೌರವ ಇದೆ. ಪಿತೃದರ್ಪಣ ಸಮಯದಲ್ಲಿ ಪೂಜಾವಿಧಿಗಳ ನಡುವೆ ಮೊದಲ ಭೋಜನ ಕಾಗೆಗೆ ನೀಡಲಾಗುತ್ತದೆ.
ಇನ್ನೊಂದು ಕಡೆ ಹೊಸ ಗಾಡಿಯ ಮೇಲೆ ಕಾಗೆ ಕುಳಿತರೆ ಅದು ಅಪಶಕುನ, ಒಮ್ಮೊಮ್ಮೆ ಅದರ ಸ್ವರ ಕರ್ಕಶ, ಮಗದೊಮ್ಮೆ ನೆಂಟರ ಆಗಮನದ ಶುಭ ಸೂಚಕ. ಕಾಗೆ ಶನಿ ದೇವರ ವಾಹನ ಎಂದು ವಿಶೇಷವಾದ ಸ್ಥಾನಮಾನ ಎಂಬೆಲ್ಲಾ ನಂಬಿಕೆಗಳು ಪ್ರಚಲಿತದಲ್ಲಿದೆ.
ಬಾಲ್ಯದಲ್ಲಿ ಪಠ್ಯಪುಸ್ತಕದಲ್ಲಿ ಬಾಯಾರಿದ ಬುದ್ಧಿವಂತ ಕಾಗೆ ಬಗ್ಗೆ ಕಥೆಯನ್ನು ನಾವು ಕೇಳಿದ್ದೇವೆ. ಕಾಗೆಗಳು ಪರಿಸರ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪಕ್ಷಿಯಾಗಿದೆ. ಸಾಮಾನ್ಯವಾಗಿ ಕಾಗೆಗಳು ಕಸ ಕಡ್ಡಿಗಳಿಂದ ತಮ್ಮ ಗೂಡುಗಳನ್ನು ಕಟ್ಟಿಕೊಳ್ಳುವುದು ನಾವು ನೋಡಿರುವ ಸಹಜವಾದ ಪ್ರಕ್ರಿಯೆ. ಆದರೆ, ಇಲ್ಲೊಂದು ಕಾಗೆ ವಿಶೇಷವಾಗಿ ಗೂಡು ನಿರ್ಮಿಸಿ ಗಮನ ಸೆಳೆದಿದೆ. ಈ ಕಾಗೆ ಸೆಂಟ್ರಿಂಗ್ ಕಾಮಗಾರಿಗೆ ಬಳಸುವ ಸಣ್ಣಸಣ್ಣ ಕಬ್ಬಿಣದ ತಂತಿಗಳಿಂದಲೇ ಸಂಪೂರ್ಣವಾಗಿ ತನ್ನ ಗೂಡನ್ನು ಕಟ್ಟಿರುವುದು ವಿಚಿತ್ರವಾದರೂ ಸತ್ಯ.
ಈ ದೃಶ್ಯ ಕಂಡು ಬಂದಿರುವುದು ಸುಳ್ಯದ ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಆವರಣದಲ್ಲಿ ಬೆಳೆಸಿದ ಒಂದು ಮರದಲ್ಲಿ. ಅಪಾಯಕಾರಿ ಸ್ಥಿತಿಯಲ್ಲಿದ್ದ ಮರದ ಗೆಲ್ಲನ್ನು ತೆರವುಗೊಳಿಸಲು ಮುಂದಾದಾಗ ಈ ಕೊಂಬೆಯಲ್ಲಿ ಕಾಗೆಯ ಎರಡು ಗೂಡುಗಳಿರುವುದು ಕಂಡುಬಂತು.
ಅದರಲ್ಲಿ ಒಂದು ಗೆಲ್ಲಿನಲ್ಲಿದ್ದ ಗೂಡಿನಲ್ಲಿ ಕಾಗೆಗಳ ವಾಸ್ತವ್ಯವಿತ್ತು. ಇನ್ನೊಂದು ಗೂಡಿನಲ್ಲಿ ಕಾಗೆಗಳ ವಾಸ್ತವ್ಯವಿರಲಿಲ್ಲ. ಕೊಂಬೆ ತೆರವು ಮಾಡದೇ ಕಾಗೆಗಳ ವಾಸ್ತವ್ಯ ಇಲ್ಲದ ಗೂಡನ್ನು ನೋಡಿದಾಗ ಅಚ್ಚರಿ ಕಾದಿತ್ತು. ಇಲ್ಲಿ ಕಾಗೆಯ ಗೂಡುಗಳು ಸುಮಾರು ಎರಡು ಕೆಜಿಯಷ್ಟು ಸಣ್ಣಸಣ್ಣ ಕಬ್ಬಿಣದ ತಂತಿಗಳಿಂದಲೇ ಸಂಪೂರ್ಣವಾಗಿ ನಿರ್ಮಾಣವಾಗಿರುವುದು ಕಂಡು ಬಂದಿದೆ.
ಕಾಗೆಗಳು ವಾಸವಿದ್ದ ಇನ್ನೊಂದು ಗೂಡು ಕೂಡಾ ಸಂಪೂರ್ಣವಾಗಿ ಕಬ್ಬಿಣದ ತಂತಿಗಳಿಂದಲೇ ನಿರ್ಮಾಣವಾಗಿತ್ತು. ಅದನ್ನು ಮರದಲ್ಲೇ ಉಳಿಸಲಾಗಿದೆ. ಇದು ವಿಚಿತ್ರವಾದರೂ ನಂಬಲೇಬೇಕಾದ ವಿಷಯವಾಗಿದೆ. ಮರದ ಕಡ್ಡಿಗಳ ಅಲಭ್ಯತೆಯ ಹಿನ್ನೆಲೆಯಲ್ಲಿ ಮತ್ತು ಪದೇ ಪದೇ ಹಾಳಾಗುವ ಕಸ ಕಡ್ಡಿಯ ಗೂಡಿನ ಬದಲು ದೀರ್ಘ ಬಾಳಿಕೆಯ ಕಬ್ಬಿಣದ ತಂತಿಯ ಗೂಡಿಗೆ ಕಾಗೆ ಮಾರುಹೋಗಿರುವುದು ಅಚ್ಚರಿಯ ಜೊತೆಗೆ ಸೋಜಿಗವೇ ಸರಿ. ಇದೀಗ ಈ ಖಾಲಿ ಕಾಗೆ ಗೂಡನ್ನು ಇದೇ ವಿದ್ಯಾಸಂಸ್ಥೆಯ ವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದೆ.