ಸಮಗ್ರ ನ್ಯೂಸ್: ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಆತ ಕಂಪನಿಯೊಂದರಲ್ಲಿ ಎಕ್ಸಿಕ್ಯೂಟೀವ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ವಿಧಿಯಾಟಕ್ಕೆ ಬಲಿಯಾಗಿ ಕೇವಲ 26 ವರ್ಷ ಸಣ್ಣ ವಯಸ್ಸಿನ ಈ ನಗುಮುಖದ ಯುವಕ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಆದರೆ ಸಾವಿನಲ್ಲೂ ಸಾರ್ಥಕತೆ ಮೆರೆದ ಆತ ಈಗ ಐದಕ್ಕೂ ಹೆಚ್ಚು ಜನರ ಜೀವಕ್ಕೆ ಜೀವ ತುಂಬಿದ್ದಾನೆ.
ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಈ ಯುವಕನ ಹೆಸರು ದೀಪಕ್. ಅಪಘಾತವಾಗಿ ಮೆದುಳು ನಿಷ್ಕ್ರಿಯಗೊಂಡ ಈ ಯುವಕನ ಅಂಗಾಂಗ ದಾನ ಮಾಡುವ ಮೂಲಕ ಈತನ ಕುಟುಂಬಸ್ಥರು ನೋವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ದೀಪಕ್ ಅಂಗಾಂಗ ದಾನದ ಮೂಲಕ ಇದೀಗ ಸಾವಿನಲ್ಲೂ ಇತರರ ಬಾಳಿಗೆ ಬೆಳಕಾಗಿದ್ದಾನೆ.
ಏನಿದು ಘಟನೆ?
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ತಿಪ್ಪಸಂದ್ರ ಗ್ರಾಮದ ನಿವಾಸಿ ದೀಪಕ್ ಕುಟುಂಬದವರು ಕಳೆದ 15 ವರ್ಷಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಂಗೊಂಡನಹಳ್ಳಿಯಲ್ಲಿ ವಾಸವಿದ್ದರು. ಸೆಪ್ಟೆಂಬರ್ 25ರಂದು ನೈಸ್ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ದೀಪಕ್ ತೀವ್ರವಾಗಿ ಗಾಯಗೊಂಡಿದ್ದರು. ನಿಂತಿದ್ದ ಕ್ಯಾಂಟರಿಗೆ ದೀಪಕ್ ಅವರ ಕಾರು ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ದೀಪಕ್‍ರನ್ನು ಕೂಡಲೇ ಆರ್‌ಆರ್ ನಗರದ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ದುರಾದೃಷ್ಟವೆಂಬಂತೆ ದೀಪಕ್ ತಲೆಗೆ ಗಂಭೀರ ಪೆಟ್ಟು ಬಿದ್ದು ಮೆದುಳು ನಿಷ್ಕ್ರಿಯಗೊಂಡಿತ್ತು.
ಮೆದುಳು ನಿಷ್ಕ್ರಿಯೆಗೊಂಡ ಹಿನ್ನೆಲೆ ದೀಪಕ್ ಬದುಕುವುದು ಅಸಾಧ‍್ಯವಾಗಿತ್ತು. ವೈದ್ಯರು ಸಹ ಏನೂ ಮಾಡಲಾಗದು ಎಂದಿದ್ದರು. ಜೀವಂತ ಶವವಾಗಿದ್ದ ದೀಪಕ್ ನೆನೆದು ಆತನ ಕುಟುಂಬಸ್ಥರು ಕಣ್ಣಿರಿಟ್ಟಿದ್ದರು. ಇದೇ ವೇಳೆ ಆತನ ಪೋಷಕರು ದೊಡ್ಡ ನಿರ್ಧಾರವೊಂದಕ್ಕೆ ಬಂದಿದ್ದರು. ಏನೇ ಮಾಡಿದರೂ ಮಗ ಬದುಕುವುದು ಸಾಧ‍್ಯವಿರಲಿಲ್ಲ. ಹೀಗಾಗಿ ಆತನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ತೀರ್ಮಾನಿಸಿದರು. ದೀಪಕ್ ಕಿಡ್ನಿ, ಹೃದಯ, ಕಣ್ಣು, ಚರ್ಮ ಸೇರಿದಂತೆ ಇತರೆ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.
ಸದ್ಯ ಆರ್.ಆರ್.ನಗರದ ಎಸ್‍ಎಸ್ ಸ್ಪರ್ಶ್ ಆಸ್ಪತ್ರೆಯಲ್ಲಿ ದೀಪಕ್ ಅವರ ಮೃತದೇಹವಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗುವುದಾಗಿ ಮೂಲಗಳು ತಿಳಿಸಿವೆ.