ಸಮಗ್ರ ನ್ಯೂಸ್: ಮೈಸೂರಿನ ಸಾಂಪ್ರದಾಯಿಕ ಬೆಳೆಗಳಲ್ಲಿ ಅಗ್ರಸ್ಥಾನ ನಂಜನಗೂಡಿನ ರಸಬಾಳೆಯದ್ದು. ಮೈಸೂರಿನ ಸ್ಥಳೀಯ ಸಾಂಪ್ರದಾಯಿಕ ಹಿನ್ನೆಲೆಯುಳ್ಳ ನಂಜನಗೂಡು ರಸಬಾಳೆ ವಿಶಿಷ್ಟ ಗುಣಗಳಿಗೆ ಪ್ರಖ್ಯಾತಿ ಪಡೆದಿದೆ.
ಸಾಮಾನ್ಯವಾಗಿ ನಂಜನಗೂಡು ಬಾಳೆಹಣ್ಣನ್ನು ನಂಜನಗೂಡು ರಸ ಬಾಳೆಹಣ್ಣು ಎಂದು ಕರೆಯುತ್ತಾರೆ. ರಾಸಾಯನಿಕ ಗೊಬ್ಬರಗಳ ಅತೀ ಬಳಕೆಯಿಂದಾಗಿ ಅದರ ರುಚಿ ಮತ್ತು ಸುವಾಸನೆ ಬದಲಾಗಿರುವುದು ಬೇಸರದ ಸಂಗತಿ. ನಂಜನಗೂಡು ಬಾಳೆಹಣ್ಣು ಅನನ್ಯ ರುಚಿ ಮತ್ತು ಸುವಾಸನೆಯನ್ನು ಹೊಂದಿರಲು ಕಾರಣ ನಂಜನಗೂಡಿನ ಸುತ್ತ ಮುತ್ತಲಿರುವ ಕಪ್ಪು ಜೇಡಿಮಣ್ಣು. ಇದೇ ಬಾಳೆಹಣ್ಣನ್ನು ಬೇರೊಂದು ಪ್ರದೇಶದಲ್ಲಿ ಬೆಳೆದರೆ ಅದರ ರುಚಿ ಮತ್ತು ಸುವಾಸನೆ ನಂಜನಗೂಡಿನ ಬಾಳೆಹಣ್ಣಿಗಿಂತ ಕಡಿಮೆಯಾಗಿರುತ್ತದೆ. ಈ ರುಚಿ ಹಾಗು ಸುವಾಸನೆಯ ಗುಟ್ಟು ಅದರ ಜೀನ್ ಗಳಲ್ಲಿವೆ.
ಮೈಸೂರಿಗೂ, ಮೈಸೂರ್ ಪಾಕ್ ಗೂ ಇರೋ ಸಂಬಂಧ ಏನು ಗೊತ್ತೇ ?
ಸಾಮಾನ್ಯವಾಗಿ ಮೈಸೂರ್ ಪಾಕ್ ತಿನ್ನುವಾಗ ಎದುರಾಗುವ ಮೊದಲ ಪ್ರಶ್ನೆ ಈ ಮೈಸೂರಿಗೂ ಮೈಸೂರ್ ಪಾಕ್‌ಗೂ ಏನು ಸಂಬಂಧ, ಇಲ್ಲಿ ತಯಾರಾಗಿದ್ದಾದರೂ ಹೇಗೆ? ಎನ್ನುವುದು. ಆದರೆ ಮೈಸೂರ್ ಪಾಕ್ ಗೆ ತನ್ನದೇ ವಿಶಿಷ್ಟ ಇತಿಹಾಸವಿರುವುದನ್ನು ಕಾಣಬಹುದಾಗಿದೆ.
ಮೈಸೂರು ಮಹಾರಾಜರ ಪಾಕಶಾಲೆಯಲ್ಲಿ ಆಕಸ್ಮಿಕವಾಗಿ ತಯಾರಾದ ಪಾಕ ಮೈಸೂರ್ ಪಾಕ್ ಆಗಿದ್ದು. ಇದನ್ನು ಕಂಡುಹಿಡಿದವರು ಕಾಕಾಸುರ ಮಾದಪ್ಪನವರು. ಇವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯಲ್ಲಿ ಸಿಹಿ ತಿಂಡಿ ತಯಾರಿಸುವ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದರು.
ರಾಜ ಕುಟುಂಬಕ್ಕೆ ಬೇಕಾದ ಸಿಹಿ ಮತ್ತು ಖಾರದ ತಿಂಡಿಯನ್ನು ಇವರೇ ತಯಾರಿಸುತ್ತಿದ್ದರು. ಒಮ್ಮೆ ಮಹಾರಾಜರು ತಿಂಡಿ ತಯಾರಿಸುವುದರಲ್ಲಿ ಜಾಣ್ಮೆ ಹೊಂದಿದ್ದ ಕಾಕಾಸುರ ಮಾದಪ್ಪನವರಿಗೆ ಹೊಸದಾದ ಯಾವುದಾದರೊಂದು ತಿಂಡಿ ತಯಾರಿಸುವಂತೆ ಆಜ್ಞೆ ಮಾಡಿದರು. ಮಹಾರಾಜರು ಹೇಳಿದ ಮೇಲೆ ಮುಗಿಯಿತು. ಮರು ಮಾತನಾಡುವ ಹಾಗಿಲ್ಲ. ಹೀಗಾಗಿ ಏನು ಹೊಸ ತಿಂಡಿ ತಯಾರಿಸುವುದು ಎಂದು ಅವರು ಆಲೋಚಿಸ ತೊಡಗಿದರು.
ತಮಗೆ ತೋಚಿದ ತಿಂಡಿ ತಯಾರಿಸಲು ಕಾಕಾಸುರ ಮಾದಪ್ಪ ಮುಂದಾದರು. ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿಕೃಷ್ಣರಾಜ ಒಡೆಯರಿಗೆ ಕೊಟ್ಟರು. ಇದರ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರನ್ನು ಬೆನ್ನು ತಟ್ಟಿ ಪ್ರಶಂಶಿಸಿದರು. ರುಚಿ ಶುಚಿಯಾದ ಅಡುಗೆಗೆ ನಳಪಾಕ ಎಂದು ಕರೆಯುತ್ತೇವೆ. ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ ‘ಮೈಸೂರು ಪಾಕ’ ಎಂದು ಹೆಸರಿಡೋಣ ಎಂದು ನಿರ್ಧರಿಸಿದರು.
ಇನ್ನು ಈ ಮೈಸೂರ್ ಪಾಕ್ ತಯಾರಕರಾದ ಕಾಕಾಸುರ ಮಾದಪ್ಪ ಅವರ ತಲೆಮಾರಿನವರು ಇವತ್ತಿಗೂ ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ದೇವರಾಜ ಮಾರುಕಟ್ಟೆ ಕಟ್ಟಡದಲ್ಲಿ ಗುರು ಸ್ವೀಟ್ ಮಾರ್ಟ್ ಎಂಬ ಬೇಕರಿ ನಡೆಸುತ್ತಿದ್ದಾರೆ. ಇಲ್ಲಿ ಹಿಂದಿನ ಕಾಲದ ಮೈಸೂರ್ ಪಾಕ್ ಅದೇ ರುಚಿಯಲ್ಲಿ ಗ್ರಾಹಕರಿಗೆ ದೊರೆಯುತ್ತಿರುವುದು ವಿಶೇಷ. ಮೈಸೂರುಪಾಕ್ ಕೊಳ್ಳಲು ಜನ ಬೇಕರಿಗೆ ಮುಗಿಬೀಳುತ್ತಾರೆ.