ಸಮಗ್ರ ನ್ಯೂಸ್: ಉದ್ಯಮಿ ಭಾಸ್ಕರ ಶೆಟ್ಟಿಯವರನ್ನು ಕೊಲೆಗೈದು ಹೋಮಕುಂಡದಲ್ಲಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೀಡಾದ ಭಾಸ್ಕರ ಶೆಟ್ಟಿ ತಾಯಿ ಗುಲಾಬಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಹಣ ಇದ್ದವರಿಗೆ ಒಂದು ಕಾನೂನು, ಪಾಪದವರಿಗೆ ಇನ್ನೊಂದು ಕಾನೂನಾ? ಜೀವಾವಧಿ ಶಿಕ್ಷೆ ಪ್ರಕಟ ಆದವರಿಗೆ ಜಾಮೀನು ಹೇಗೆ ಸಿಕ್ಕಿದೆ? ಎಂದು ಪ್ರಶ್ನಿಸಿದ್ದಾರೆ.
ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ರಾಜೇಶ್ವರಿ ಶೆಟ್ಟಿ, ನವನೀತ್, ನಿರಂಜನ್ ಭಟ್‌ಗೆ ಜಾಮೀನು ಮಂಜೂರು ಮಾಡಿದೆ. ಜೂನ್ 8, 2021ರಂದು ಆರೋಪಿಗಳಿಗೆ ಉಡುಪಿ ಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಆದರೆ, ಆ ಬಳಿಕ ಆರೋಪಿಗಳು ಹೈಕೋರ್ಟ್ ಕದ ತಟ್ಟಿದ್ದಾರೆ.
ಹೈಕೋರ್ಟ್ ಮೂಲಕ ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ. ಜೀವಾವಧಿ ಶಿಕ್ಷೆಗೆ ಒಳಗಾದವರಿಗೆ 6 ತಿಂಗಳೊಳಗೆ ಜಾಮೀನು ಸಾಧ್ಯನಾ? ಎಂದು ಹೈಕೋರ್ಟ್ ತೀರ್ಪಿನ ವಿರುದ್ಧ ಭಾಸ್ಕರ್ ಶೆಟ್ಟಿ ತಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಕ್ಕೆ ನಾವು ಸುಪ್ರೀಂ ಕೋರ್ಟ್ ಮೂಲಕ ಹೋರಾಟ ನಡೆಸುತ್ತೇವೆ ಎಂದು ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಟ್ಟಿ ಹೇಳಿದ್ದಾರೆ.