ತಿರುವನಂತಪುರಂ: ಕೇರಳದ ಕೆಎಸ್‍ಆರ್‌ಟಿಸಿ ಚಾಲಕರೊಬ್ಬರು ರಾಜ್ಯದಲ್ಲಿ ನಡೆಯುತ್ತಿರುವ ಕಲ್ಲು ತೂರಾಟದಿಂದ ರಕ್ಷಿಸಿಕೊಳ್ಳಲು ಬಸ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಗುರುವಾರ ಎನ್‍ಐಎ ನಡೆಸಿದ್ದ ದಾಳಿ ವಿರೋಧಿಸಿ ಇಡೀ ದಿನ ಕೇರಳ ಬಂದ್‌ಗೆ ಪಿಎಫ್‍ಐ (PFI) ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಂದ್ ಹಿಂಸಾಚಾರ ನಡೆದಿದ್ದು, ಕೇರಳದ ಆಲುವಾ ಬಸ್ ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳದ ಕೆಎಸ್‍ಆರ್‌ಟಿಸಿ ಚಾಲಕನೊಬ್ಬ ತನ್ನನ್ನು ತಾನೂ ರಕ್ಷಿಸಿಕೊಳ್ಳಲು ಹೆಲ್ಮೆಟ್ ಧರಿಸಿ, ಬಸ್ ಚಲಾಯಿಸಿದ್ದಾನೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಲಪ್ಪುಳ, ಕಣ್ಣೂರು, ಕೋಝಿಕ್ಕೋಡ್ ಮತ್ತು ತಿರುವನಂತಪುರಂನಲ್ಲಿ ಕಲ್ಲು ತೂರಾಟದ ಘಟನೆಗಳು ನಡೆದಿದೆ. ಆ ಸಂದರ್ಭದಲ್ಲಿ ಸುಮಾರು ಒಂದು ಡಜನ್ ಕೆಎಸ್‍ಆರ್‌ಟಿಸಿ ಬಸ್ಸುಗಳು ಹಾನಿಗೊಳಗಾಗಿವೆ. ಅಷ್ಟೇ ಅಲ್ಲದೇ ಕೋಝಿಕ್ಕೋಡ್ ಮತ್ತು ಅಲಪ್ಪುಳದಲ್ಲೂ ಲಾರಿಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಜೊತೆಗೆ ತಿರುವನಂತಪುರಂನ ಕುಮಾರಿಚಂತ ಎಂಬಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಖಾಸಗಿ ವಾಹನದ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಭದ್ರತೆಯನ್ನು ನೀಡಿದ್ದಾರೆ.