ಸಮಗ್ರ ನ್ಯೂಸ್: ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಕೆರಿಬಿಯರ್ ಪ್ರೀಮಿಯರ್ ಲೀಗ್ನಲ್ಲಿ ಒಡಿಯನ್ ಸ್ಮಿತ್ ಅಕ್ಷರಶಃ ಅಬ್ಬರಿಸಿದ್ದಾರೆ.
ಸಿಪಿಎಲ್ನ 25ನೇ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಹಾಗೂ ಜಮೈಕಾ ತಲ್ಲವಾಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಜಮೈಕಾ ನಾಯಕ ರೋವ್ಮನ್ ಪೊವೆಲ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಜಮೈಕಾ ಬೌಲರ್ಗಳು 15 ಓವರ್ನಲ್ಲಿ ನೀಡಿದ್ದು ಕೇವಲ 97 ರನ್ಗಳು ಮಾತ್ರ. ಅಷ್ಟೇ ಅಲ್ಲದೆ ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ 6 ಪ್ರಮುಖ ವಿಕೆಟ್ಗಳನ್ನು ಕೂಡ ಉರುಳಿಸಿದ್ದರು.
ಆದರೆ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಒಡಿಯನ್ ಸ್ಮಿತ್ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ವಿಶೇಷ. ಅಂದರೆ ಡೆತ್ ಓವರ್ಗಳ ವೇಳೆ ಬ್ಯಾಟ್ ಬೀಸಿದ ಸ್ಮಿತ್ ಅಕ್ಷರಶಃ ಅಬ್ಬರಿಸಿದರು. ಅದರಲ್ಲೂ ಪ್ರಿಟೋರಿಯಸ್ ಎಸೆದ 18ನೇ ಓವರ್ನಲ್ಲಿ ಸಿಕ್ಸ್ಗಳ ಸುರಿಮಳೆಗೈದರು.
ಪ್ರಿಟೋರಿಯಸ್ನ ಮೊದಲ ಎಸೆತದಲ್ಲಿ ಸ್ಮಿತ್ ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸರ್ ಬಾರಿಸಿದರು. ಎರಡನೇ ಎಸೆತದಲ್ಲಿ ಯಾವುದೇ ರನ್ ಮೂಡಿಬಂದಿರಲಿಲ್ಲ. ಮೂರನೇ ಎಸೆತದಲ್ಲಿ ಡೀಪ್ ಕವರ್ನತ್ತ ಸಿಕ್ಸ್ ಸಿಡಿಸಿದರು. ನಾಲ್ಕನೇ ಎಸೆತ ವೈಡ್. ಆ ಬಳಿಕ ಎಸೆದ ಮತ್ತೊಂದು ಎಸೆತದಲ್ಲಿ ಮಿಡ್ ವಿಕೆಟ್ನತ್ತ ಸಿಕ್ಸರ್ ಬಾರಿಸಿದರು. ಐದನೇ ಮತ್ತು ಆರನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಬಾರಿಸುವ ಮೂಲಕ ಒಡಿಯನ್ ಸ್ಮಿತ್ ಒಂದೇ ಓವರ್ನಲ್ಲಿ 5 ಸಿಕ್ಸ್ ಸಿಡಿಸಿದರು. ಇನ್ನು 20ನೇ ಓವರ್ನಲ್ಲಿ ಮತ್ತೊಂದು ಸಿಕ್ಸ್ ಸಿಡಿಸುವ ಮೂಲಕ ಕೇವಲ 16 ಎಸೆತಗಳಲ್ಲಿ 42 ರನ್ ಚಚ್ಚಿದರು.