ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದ್ದು, ಘಟಕ ತಟಸ್ಥವಾಗಿದ್ದು, ಸಾರ್ವಜನಿಕವಾಗಿ ಉಪಯೋಗ ಇಲ್ಲದಂತಾಗಿದೆ.
ಕೆಲ ವರ್ಷಗಳಿಂದ ಸಾರ್ವಜನಿಕರಿಗಾಗಿಯೇ
ಶುದ್ಧ ನೀರಿನ ಘಟಕ ನಿರ್ಮಿಸಲಾಗಿತ್ತು. ಆದರೆ ಉದ್ಘಾಟನೆ ನಡೆದ ಬಳಿಕ ಕೆಲವೇ ಕೆಲವು ದಿನ ಮಾತ್ರ ಇದರ ಸದುಪಯೋಗವನ್ನು ಜನರು ಪಡೆದಿದ್ದರು ಅಷ್ಟೆ.
ಆನಂತರ ಅದು ಕೆಟ್ಟು ಹೋಗಿದ್ದು ಅದನ್ನು ಸರಿಪಡಿಸುವ ಕಡೆ ಯಾರು ಕೂಡ ತಲೆ ಹಾಕಲಿಲ್ಲ. ತಾಲೂಕಿನ ಹಲವೆಡೆ ಇಂಥಹ ಘಟಕಗಳು ನಿರ್ಮಾಣವಾಗಿದ್ದು, ಬಹುತೇಕ ಘಟಕಗಳು ಸರ್ಕಾರಿ ಬಿಲ್ ನಲ್ಲಷ್ಟೇ ಸದೃಢವಾಗಿವೆ.
ಇನ್ನು ಜಾಲ್ಸೂರಿನಲ್ಲಿ ಸ್ಥಾಪಿಸಲಾದ ನೀರಿನ ಘಟಕ ಬಂಟ್ವಾಳದ್ದು ಎಂದಿದೆ. ಬಂಟ್ವಾಳ ತಾಲೂಕಿನ ಘಟಕವನ್ನು ಜಾಲ್ಸೂರಿನಲ್ಲಿ ಸ್ಥಾಪಿಸಿದರಾ? ಅಥವಾ ಜಾಲ್ಸೂರನ್ನೇ ಬಂಟ್ವಾಳಕ್ಕೆ ಶಿಪ್ಟ್(!) ಮಾಡಿದ್ದಾರಾ ಅಧಿಕಾರಿಗಳೇ ಉತ್ತರಿಸಬೇಕಿದೆ. ಒಟ್ಟಿನಲ್ಲಿ ಸರ್ಕಾರದ ಬಹುನಿರೀಕ್ಷಿತ ಸಾರ್ವಜನಿಕ ಯೋಜನೆ ದ.ಕ ಜಿಲ್ಲೆಯ ಹಲವೆಡೆ ಮೂಲೆಗುಂಪಾಗಿರುವುದು ತೆರಿಗೆ ಹಣದ ಪೋಲು ಮತ್ತು ದುರುಪಯೋಗ ಎಂಬುದು ತಕ್ಷಣಕ್ಕೆ ಕಂಡುಬರುವ ಸ್ಥಿತಿ. ಇದರ ಸಂಪೂರ್ಣ ತನಿಖೆಯಿಂದ ಹಲವು ಅಕ್ರಮಗಳು, ಭ್ರಷ್ಟಾಚಾರ ಹೊರಬೀಳುವ ಸಾಧ್ಯತೆ ಇದೆ.ಈ ಗ್ರಾಮದಲ್ಲಿ ಬೀದಿದೀಪದ ಸಮಸ್ಯೆ ಕೂಡ ಕಂಡು ಬರುತ್ತಿದ್ದು, ಈ ಬಗ್ಗೆ ಪಿಡಿಓ ಗಮನ ಹರಿಸಬೇಕಾಗಿದೆ.