ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಜಾಬ್ ಬೇಕು ಅಂತಾ ಯುವತಿಯರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ ಅತ್ತ ಮುಸ್ಲಿಂ ರಾಷ್ಟ್ರ ಇರಾನ್ ನಲ್ಲಿ ಹಿಜಾಬ್ ವಿರುದ್ದವೇ ಯುವತಿಯರು ತಿರುಗಿ ಬಿದ್ದಿದ್ದಾರೆ. ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಐವರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ಇರಾನ್ ನ ಬೀದಿಬೀದಿಗಳಲ್ಲಿ ಹಿಜಾಬ್ ಕಿತ್ತೆಸೆದು ಆಕ್ರೋಶ ಹೊರಹಾಕುತ್ತಿದ್ದಾರೆ. ಹಿಜಾಬ್ ವಿರೋಧಿ ಹೋರಾಟದಲ್ಲಿದ್ದ ಯುವತಿಯೊಬ್ಬಳ ಸಾವಿನ ಬಳಿಕ ಭುಗಿಲೆದ್ದ ಆಕ್ರೋಶಕ್ಕೆ ರಾಜಧಾನಿ ಟೆಹ್ರಾನ್ ನಲುಗಿ ಹೋಗಿದೆ.
ಕರ್ನಾಟಕದಲ್ಲಿ ಹಿಜಾಬ್ ಬೇಕು ಅಂತಾ ವಿದ್ಯಾರ್ಥಿನಿಯರು ಬೀದಿಗಿಳಿದು ಹೋರಾಟ ಮಾಡಿದ್ರು. ಹಿಜಾಬ್ ಹಂಗಾಮ ರಾಜ್ಯದ ಮೂಲೆ ಮೂಲೆಯಲ್ಲೂ ಸಂಚಲನವನ್ನೇ ಸೃಷ್ಟಿಸಿತ್ತು. ಹೈಕೋರ್ಟ್, ಸುಪ್ರೀಂಕೋರ್ಟ್ವರೆಗೂ ಡ್ರೆಸ್ ಕೋಡ್ ಕದನ ವ್ಯಾಪಿಸಿತ್ತು. ಇವತ್ತಿಗೂ ಸುಪ್ರೀಂ ಕೋರ್ಟ್ ಕಟಕಟೆಯಲ್ಲಿ ಹಿಜಾಬ್ ವಿಚಾರಣೆ ಮುಂದುವರಿದಿದೆ. ಆದ್ರೆ ಕಟ್ಟರ್ ಇಸ್ಲಾಮಿಕ್ ರಾಷ್ಟ್ರ ಇರಾನ್ನಲ್ಲಿ ಹಿಜಾಬ್ ವಿರೋಧಿ ಹೋರಾಟ ಸರ್ಕಾರವನ್ನೇ ನಡುಗುವಂತೆ ಮಾಡಿದೆ.
ಕಳೆದ ಹಲವು ತಿಂಗಳಿಂದ ಇರಾನ್ನಲ್ಲಿ ಹಿಜಾಬ್ ಸೇರಿದಂತೆ ಕಟ್ಟರ್ ಸಂಪ್ರದಾಯಗಳಿಗೆ ಯುವತಿಯರು ಸೆಡ್ಡು ಹೊಡೆಯುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಕಡ್ಡಾಯಗೊಳಿಸಿರುವುದಕ್ಕೆ ಯುವತಿಯರು, ಮಹಿಳೆಯರು ಸಿಟ್ಟಿಗೆದ್ದಿದ್ದಾರೆ. ಇರಾನ್ನ ಬಹುತೇಕ ಸ್ಥಳಗಳಲ್ಲಿ ತಿಂಗಳುಗಳಿಂದ ಹಿಜಾಬ್ ವಿರೋಧಿ ಅಭಿಯಾನ ನಡೆಯುತ್ತಲೇ ಇತ್ತು. ಈ ಸಂಬಂಧ 22 ವರ್ಷದ ಮಶಾ ಅಮೀನಿ ಎಂಬ ಯುವತಿಯ ಹತ್ಯೆ ನಡೆಯಿತೋ, ಅಲ್ಲಿಂದ ಹಿಜಾಬ್ ವಿರೋಧಿ ಅಭಿಯಾನ ಪ್ರತಿಭಟನೆ ರೂಪ ಪಡೆದುಕೊಂಡಿದೆ.
ಇರಾನ್ನ ಕಠಿಣ ಡ್ರೆಸ್ ಕೋಡ್ ಪ್ರಕಾರ ಬಿಗಿಯಾದ ಪ್ಯಾಂಟ್, ರಿಪ್ಪ್ಡ್ ಜೀನ್ಸ್, ಮೊಣಕಾಲು ಕಾಣುವಂಥಾ ಬಟ್ಟೆಗಳು, ಕಣ್ಣಿಗೆ ರಾಚುವಂಥಾ ಬಣ್ಣದ ಬಟ್ಟೆಗಳನ್ನು ಧರಿಸುವಂತಿಲ್ಲ. ಆದ್ರೆ ಈ ಟಫ್ ರೂಲ್ಸ್ಗಳಿಗೆ ಕೇರ್ ಮಾಡದ ಯುವಜನತೆ ಸ್ಕಾರ್ಫ್ಗಳನ್ನೇ ಕಿತ್ತೆಸೆದು ಸರ್ಕಾರದ ನಿಯಮದ ವಿರುದ್ಧ ಪ್ರತಿಭಟನೆ ನಡೆಸ್ತಿದೆ. ಹೀಗೆ ಪ್ರತಿಭಟನೆ ಮಾಡುವವರನ್ನು ನಿಯಂತ್ರಿಸಲು ನೇಮಕವಾಗಿರೋ ನೈತಿಕ ಪೊಲೀಸರ ವಿರುದ್ದ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.