ಸಮಗ್ರ ನ್ಯೂಸ್: ಕಣ್ಣೀರಿನೊಂದಿಗೆ ಬ್ರಿಟನ್ ಮಹಾರಾಣಿ ಎಲಿಜಬೆತ್ II ರ ಅಂತ್ಯಕ್ರೀಯೆ ಸೋಮವಾರ ನಡೆಯಿತು. ಇಡೀ ಬ್ರಿಟನ್‌ನಲ್ಲಿ ಸೋಮವಾರ ನೀರವತೆ ಆವರಿಸಿತ್ತು, ವೆಸ್ಟ್‌ಮಿನ್‌ಸ್ಟರ್ ಅಬೇಯ ರಸ್ತೆಯ ಇಕ್ಕೆಲಗಳಲ್ಲೂ ಲಕ್ಷಾಂತರ ಮಂದಿ ನೆರೆದಿದ್ದರು. ಬರೋಬ್ಬರಿ 70 ವರ್ಷಗಳ ಕಾಲ ಬ್ರಿಟನ್ ಅನ್ನು ಆಳಿದ್ದ ರಾಣಿ 2ನೇ ಎಲಿಜಬೆತ್ ಅವರ ಪಾರ್ಥಿವ ಶರೀರದ ಮೆರವಣಿಗೆ ಸಾಗುತ್ತಿದ್ದಂತೆ “ಗಾಡ್ ಸೇವ್ ದಿ ಕಿಂಗ್’ ಎಂಬ ಉದ್ಘೋಷ ಮೊಳಗಿತ್ತು, ಎಲ್ಲರ ಕಣ್ಣಂಚಲ್ಲೂ ನೀರು ಜಿನುಗುತ್ತಿತ್ತು.
ಸೆ. 8ರಂದು ನಿಧನ ಹೊಂದಿದ ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿದ್ದು, ವಿಶ್ವನಾಯಕರು ಸೇರಿದಂತೆ ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ ರಾಣಿಯ ಪಾರ್ಥಿವ ಶರೀರವನ್ನು ವೆಸ್ಟ್‌ಮಿನ್‌ಸ್ಟರ್ ಹಾಲ್‌ನಿಂದ ವಿಂಡ್ಸರ್ ಕ್ಯಾಸಲ್‌ನ ಸೈಂಟ್ ಜಾರ್ಜ್ ಚಾಪೆಲ್‌ಗೆ ಮೆರವಣಿಗೆ ಮೂಲಕ ಒಯ್ದು, ಪತಿ ಪ್ರಿನ್ಸ್ ಫಿಲಿಪ್ ಸಮಾಧಿಯ ಪಕ್ಕದಲ್ಲೇ ಮಣ್ಣು ಮಾಡಲಾಯಿತು.
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ದೇಶ-ವಿದೇಶಗಳ ಸುಮಾರು 2 ಸಾವಿರ ಗಣ್ಯರು ರಾಣಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.