ಸಮಗ್ರ ನ್ಯೂಸ್: ಅದೃಷ್ಟ, ಹಣೆಬರಹಗಳನ್ನು ನಂಬಬಾರದು ಮೈ ಬಗ್ಗಿಸಿ ದುಡಿಯಬೇಕು. ಅದೃಷ್ಟಗಳೆಲ್ಲಾ ಸುಳ್ಳು ಕಷ್ಟಪಟ್ಟು ದುಡಿದರೆ ಇಷ್ಟಪಟ್ಟಂತೆ ಬದುಕಬಹುದು ಎಂಬೆಲ್ಲಾ ಸ್ಪೂರ್ತಿದಾಯಕ ಹಾಗೂ ಜೀವನವನ್ನು ಹುರಿದುಂಬಿಸುವ ಸಾಕಷ್ಟು ಮಾತುಗಳನ್ನು ಕೇಳಿದ್ದೇವೆ. ಈ ಮಾತುಗಳು ಸತ್ಯವೂ ಹೌದು.
ಆದರೆ ಕೇರಳದಲ್ಲಿ ಅದೃಷ್ಟವೊಂದು ವ್ಯಕ್ತಿಯ ಬದುಕನ್ನೇ ಬದಲಿಸಿದೆ. ಕೆಲಸ ಅರಸಿ ದೇಶ ಬಿಟ್ಟು ಹೋಗಲು ಬಯಸಿದ್ದ ಯುವಕನ್ನು ಅದೃಷ್ಟವೊಂದು ತಡೆದು ನಿಲ್ಲಿಸಿದ್ದು, ಈಗ ಆತ ಕೋಟ್ಯಾಧಿಪತಿ ಇದಕ್ಕೆ ಕಾರಣವಾಗಿದ್ದು ಒಂದು ಲಾಟರಿ.
ಮಲೇಷ್ಯಾಗೆ ಅಡುಗೆಯವನಾಗಿ ಕೆಲಸಕ್ಕೆ ಹೋಗಲು ನಿರ್ಧರಿಸಿದ್ದ ಕೇರಳದ ಆಟೋ ಚಾಲಕರೊಬ್ಬರು ಭಾನುವಾರ ಭರ್ಜರಿ 25 ಕೋಟಿ ರೂ.ಗಳ ಓಣಂ ಬಂಪರ್ ಲಾಟರಿ ಗೆದ್ದಿದ್ದಾರೆ. ಇವರು ಮಲೇಷ್ಯಾಕ್ಕೆ ತೆರಳಲು 3 ಲಕ್ಷ ರೂ. ಸಾಲದ ಅರ್ಜಿಯನ್ನು ಬ್ಯಾಂಕ್ ಅನುಮೋದಿಸಿದ ಮಾರನೇ ದಿನವೇ ಅವರಿಗೆ ಲಾಟರಿ ಒಲಿದು ಬಂದಿದೆ. ಶ್ರೀವರಾಹಂ ಮೂಲದ ಅನೂಪ್ ಎಂಬುವವರರೇ ಲಾಟರಿ ಗೆದ್ದ ಅದೃಷ್ಟವಂತ. ಕಳೆದ 22 ವರ್ಷಗಳಿಂದಲೂ ಅನೂಪ್ ಲಾಟರಿ ಟಿಕೆಟ್ ಖರೀದಿಸುತ್ತಿದ್ದು, ಹಲವಾರು ಬಾರಿ ಕೆಲವು ನೂರು ರುಪಾಯಿಗಳಿಂದ ಹಿಡಿದು 5000ದವರೆಗೂ ಲಾಟರಿ ಹಣ ಗೆದ್ದಿದ್ದ. ಆದರೆ ಈ ಬಾರಿ ಅನೂಪ್ ಅದೃಷ್ಟ ಖುಲಾಯಿಸಿದೆ. ಮೊದಲಿಗೆ ಬೇರೆ ಲಾಟರಿ ಟಿಕೇಟ್ ಖರೀದಿಸಿದ್ದರೂ, ಆ ಟಿಕೆಟ್ ಸಂಖ್ಯೆ ಇಷ್ಟವಾಗದ ಕಾರಣ 2ನೇ ಟಿಕೆಟ್ ಖರೀದಿಸಿದ್ದಾರೆ. ಈ ಟಿಕೆಟ್‌ಗೆ ಭರ್ಜರಿ ಲಾಟರಿ ಸಿಕ್ಕಿದೆ.
ಈ ಹಿನ್ನೆಲೆಯಲ್ಲಿ ಅನೂಪ್ ತಾನು ಇನ್ನು ಮಲೇಷ್ಯಾಗೆ ತೆರಳುವ ಅವಶ್ಯಕತೆ ಇಲ್ಲ ಎಂದು ನಿರ್ಧರಿಸಿದ್ದಾರೆ. ತೆರಿಗೆ ಕಡಿತದ ಬಳಿಕ ಸಿಗುವ ಸುಮಾರು 15 ಕೋಟಿ ರೂ ಉಳಿಯಲ್ಲಿದ್ದು, ಅದರಲ್ಲಿ ಮನೆ ಖರೀದಿಸಿ, ಹಳೆಯ ಸಾಲಗಳನ್ನು ತೀರಿಸುತ್ತೇನೆ. ಸ್ವಲ್ಪ ಮೊತ್ತವನ್ನು ದಾನ ನೀಡಲು ಬಯಸಿದ್ದು, ಕೇರಳದಲ್ಲಿ ಹೊಟೇಲ್ ಉದ್ಯಮ ಆರಂಭಿಸುವ ಯೋಚನೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.
ನಾನು ಲಾಟರಿ ಫಲಿತಾಂಶವನ್ನು ತಿಳಿಯಲು ಟಿವಿ ನೋಡುತ್ತಾ ಕುಳಿತಿದ್ದೆ. ಈ ಮಧ್ಯೆ ನಾನು ನನ್ನ ಫೋನ್ ನೋಡಿದಾಗ ಅದರಲ್ಲಿ ಲಾಟರಿ ವಿನ್ನರ್ ಆಗಿರುವ ಮೆಸೇಜ್ ಬಂದಿತ್ತು. ಒಂದು ಕ್ಷಣ ನನಗೆ ಇದನ್ನು ನಂಬಲಾಗಲಿಲ್ಲ. ನಾನು ಫೋನ್‌ನ್ನು ನನ್ನ ಹೆಂಡತಿಗೆ ತೋರಿಸಿದೆ. ಆಕೆ ಇದು ಲಾಟರಿ ಗೆದ್ದಿರುವ ಸಂಖ್ಯೆ ಎಂಬುದನ್ನು ಖಚಿತಪಡಿಸಿದರು ಎಂದು ಲಾಟರಿ ಗೆದ್ದ ಅನೂಪ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ ಲಾಟರಿ ಖರೀದಿ ಮುಂದುವರೆಸುವಿರಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಅನೂಪ್ ಮುಂದೆಯೂ ಲಾಟರಿ ಟಿಕೆಟ್‌ಗಳನ್ನು ಖರೀದಿಸುವುದಾಗಿ ಹೇಳಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಒಮ್ಮೆಗೆ ಸ್ವೀಕರಿಸಲು ಖುಷಿಯ ಜೊತೆ ಚಿಂತೆಯೂ ಆಗುತ್ತಿದೆ ಎಂದು ಅನೂಪ್ ಹೇಳಿದ್ದಾರೆ. ಈತ ತನ್ನ ಮಕ್ಕಳು ಕೂಡಿಟ್ಟಿದ್ದ ಪಿಗ್ಗಿ ಬ್ಯಾಂಕ್ ಹಣದಿಂದ ಈ ಲಾಟರಿ ಖರೀದಿಸಿದ್ದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ.