ಸಮಗ್ರ ನ್ಯೂಸ್: ಮಂಗಳೂರು ನಗರದ ಕಾಲೇಜೊಂದರ ವಿದ್ಯಾರ್ಥಿಗೆ ಮತ್ತೊಂದು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಚೂರಿಯಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ನಗರದ ನಂತೂರು ಜಂಕ್ಷನ್ ಬಳಿ ನಡೆದಿದೆ.
ನಂತೂರು ಬಳಿಯಿರುವ ಪ.ಪೂ.ಕಾಲೇಜಿನ 17 ವರ್ಷ ಪ್ರಾಯದ ವಿದ್ಯಾರ್ಥಿ ಸೆ.15ರಂದು ಸಂಜೆ ಕಾಲೇಜು ಬಿಟ್ಟು ತನ್ನ ಗೆಳೆಯರೊಂದಿಗೆ ನಂತೂರು ಜಂಕ್ಷನ್ ಕಡೆಗೆ ನಡೆದುಕೊಡು ಹೋಗುತ್ತಿದ್ದಾಗ ಮತ್ತೊಂದು ಪ.ಪೂ.
ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಗಮಿಸಿ ‘ಮಾತನಾಡಲು ಇದೆ’ ಎನ್ನುತ್ತಾ ದೈವಸ್ಥಾನದ ಹಿಂಬದಿಗೆ ಕರೆದುಕೊಂಡು ಹೋಗಿ ಚೂರಿಯಿಂದ 17ರ ಹರೆಯದ ವಿದ್ಯಾರ್ಥಿಯ ಹೊಟ್ಟೆ, ಎಡಕೈ, ಬೆನ್ನಿಗೆ ತಿವಿದು ಗಾಯಗೊಳಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
17ರ ಹರೆಯದ ವಿದ್ಯಾರ್ಥಿಯು ಮತ್ತೊಂದು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತನ್ನ ಗೆಳೆಯನಿಗೆ ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಬೆದರಿಕೆ ಹಾಕಿದ ಬಗ್ಗೆ ಸಮಾಧಾನ ಮಾಡಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳು ಕೊಲೆ ಮಾಡುವ ಉದ್ದೇಶದಿಂದ ಚೂರಿಯಿಂದ ತಿವಿದಿದ್ದಾರೆ ಎಂಬುದಾಗಿ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡ ಮತ್ತು ಹಲ್ಲೆ ನಡೆಸಿದ ವಿದ್ಯಾರ್ಥಿಗಳು 17 ವರ್ಷ ಪ್ರಾಯದವರಾಗಿದ್ದು, ಕಾನೂನು ಸಂಕರ್ಷಕ್ಕೊಳಗಾದ ಬಾಲಕರಾದ ಹಿನ್ನೆಲೆಯಲ್ಲಿ ಅವರನ್ನು ಪೋಷಕರೊಂದಿಗೆ ವಿಚಾರಿಸಿ ಕಾನೂನು ಕ್ರಮ ಕೈಗೊಂಡು ಬಾಲ ನ್ಯಾಯ ಮಂಡಳಿಗೆ ಸೂಕ್ತ ವರದಿ ಸಲ್ಲಿಸಲಾಗಿದೆ ಎಂದು ಕದ್ರಿ ಪೊಲೀಸರು ತಿಳಿಸಿದ್ದಾರೆ.