ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಉಳ್ಳಾಲ ಠಾಣಾ ಇನ್ಸ್ ಪೆಕ್ಟರ್ ಸಂದೀಪ್ ನೇತೃತ್ವದ ತಂಡ 7ಮಂದಿ ಆರೋಪಿಗಳನ್ನು ಬಂಧಿಸಿ ಮರಳು ಸಾಗಾಟದ ಲಾರಿಯನ್ನು ವಶಪಡಿಸಿಕೊಂಡ ಘಟನೆಯೊಂದು ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಬಳಿ ನಡೆದಿದೆ.
ತಲಪಾಡಿ ನಿವಾಸಿ ರಿಯಾಜ್, ಕೆ ಸಿ ರೋಡ್ ನಿವಾಸಿ ಅಬೂಬಕರ್, ಸೋಮೇಶ್ವರ ಗ್ರಾಮ ನಿವಾಸಿ ರಘುನಾಥ, ತಲಪಾಡಿ ಚೆಕ್ ಪೋಸ್ಟ್ ನಿವಾಸಿ ರಾಜೇಶ್, ಕುದ್ರು ನಿವಾಸಿಗಳಾದ ಅತುಲ್, ರಾಮಧಾರಿ ಮತ್ತು ಪಂಕಜ್ ಬಂಧಿತ ಆರೋಪಿಗಳು.
ಬಂಧಿತರು ತಲಪಾಡಿ ಕುದ್ರು ಗಡಿಯಿಂದ ಅಕ್ರಮವಾಗಿ ಮರಳು ಸಂಗ್ರಹ ಮಾಡಿ ಅದನ್ನು ಲಾರಿಗೆ ಲೋಡ್ ಮಾಡಿ ನಂತರ ತೆಂಗಿನ ಗರಿಯಿಂದ ಮುಚ್ಚಿ ಕೇರಳ ಕಡೆ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.