ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ದಸರಾ ಇತಿಹಾಸದಲ್ಲೇ ಈ ಬಾರಿಯ ದಸರಾ ಅತ್ಯಂತ ಮಹತ್ವದ್ದಾಗಲಿದೆ. ದಸರಾ ಇತಿಹಾಸ ಪುಟಗಳಲ್ಲಿ ಈ ಬಾರಿಯ ದಸರಾ ಪ್ರಮುಖ ಸ್ಥಾನ ಪಡೆಯಲಿದೆ.
ನಾಡಹಬ್ಬ ದಸರಾ ಸೆ. 26 ರಿಂದ ಆರಂಭವಾಗಲಿದೆ. ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳು ದಸರಾ ಉದ್ಘಾಟಿಸಲಿದ್ದಾರೆ. ಇಷ್ಟು ವರ್ಷ ನಾಡಿನ ಹಿರಿಯ ಸಾಹಿತಿಗಳು, ಸ್ವಾಮೀಜಿಗಳು, ವಿಚಾರವಾದಿಗಳು, ನಾಡು ನುಡಿಗೆ ಅಸಾಮಾನ್ಯ ಸೇವೆ ಸಲ್ಲಿಸಿದವರು ದಸರಾ ಉದ್ಘಾಟಿಸುತ್ತಿದ್ದರು. ಕಳೆದ ಬಾರಿ ಈ ಸಂಪ್ರದಾಯ ಮುರಿದ ನಾಡಿನ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಅವರಿಂದ ದಸರಾ ಉದ್ಘಾಟಿಸಲಾಗಿತ್ತು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರೋ ರಾಜ್ಯ ಸರಕಾರ ರಾಷ್ಟ್ರಪತಿಗಳಿಂದ ದಸರಾ ಉದ್ಘಾಟಿಸುತ್ತಿದೆ. ದಸರಾ ಉದ್ಘಾಟನೆಗೆ ಬರಲು ರಾಷ್ಟ್ರಪತಿಗಳು ಕೂಡ ಅಧಿಕೃತವಾಗಿಯೆ ಸಮ್ಮತಿಸಿದ್ದಾರೆ. ಈ ಕಾರಣಕ್ಕೆ ಈ ಬಾರಿಯ ದಸರಾ ಮಹತ್ವದ್ದಾಗಿತ್ತು.
ದಸರಾ ಉದ್ಘಾಟನೆ ವಿಚಾರಕ್ಕೆ ಮಾತ್ರವಲ್ಲ ದಸರಾ ಜಂಬೂ ಸವಾರಿಯ ವಿಚಾರಕ್ಕೂ ಈ ಬಾರಿಯ ದಸರಾ ಮಹತ್ವಪೂರ್ಣವಾದದ್ದು. ಕಾರಣ, ದಸರಾ ಜಂಬೂ ಸವಾರಿಯ ಮೆರವಣಿಗೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಆನೆಯ ಮೇಲಿನ ಚಿನ್ನದ ಅಂಬಾರಿಯಲ್ಲಿ ಕುಳಿತ ಚಾಮುಂಡಿ ತಾಯಿಗೆ ಮೋದಿ ಪುಷ್ಪಾರಾರ್ಚನೆ ನೆರವೇರಿಸಲಿದ್ದಾರೆ. ಪ್ರಧಾನ ಮಂತ್ರಿಯೊಬ್ಬರು ಚಿನ್ನದ ಅಂಬಾರಿಗೆ ಪುಷ್ಪಾರಾರ್ಚನೆ ಮಾಡ್ತಿರೋದು ಇದೇ ಮೊದಲು ಈ ಕಾರಣಕ್ಕೆ ಈ ಬಾರಿಯ ದಸರಾ ಐತಿಹಾಸಿಕ ದಾಖಲೆ ಆಗಲಿದೆ.
ಮೂರು ತಿಂಗಳ ಹಿಂದೆಯಷ್ಟೆ ವಿಶ್ವ ಯೋಗ ದಿನಕ್ಕಾಗಿ ಮೈಸೂರಿಗೆ ಬಂದಿದ್ದ ಪ್ರಧಾನಿ ಮೋದಿ, ಅಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡಿ ದರ್ಶನ ಪಡೆದಿದ್ದರು. ಅವತ್ತು ಇಲ್ಲಿನ ದಸರಾ ಬಗ್ಗೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯ ಮೆರವಣಿಗೆ ಬಗ್ಗೆ ಪ್ರಧಾನಿಗಳಿಗೆ ವಿವರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಪ್ರಧಾನಿಗೆ ಆಹ್ವಾನ ನೀಡಿತ್ತು.
ಇನ್ನೂ ಈ ಬಾರಿ ರಾಷ್ಟ್ರಪತಿಗಳು ಮತ್ತು ಪ್ರಧಾನಿ ಮೋದಿ ಇಬ್ಬರು ನಾಡಹಬ್ಬಕ್ಕೆ ಮೈಸೂರಿಗೆ ಬರ್ತಿರೋ ಕಾರಣ ದಸರಾ ವೈಭೋಗ ಹೆಚ್ಚಾಗಿದೆ. ಕಳೆದ ಬಾರಿಗಿಂತಾ ಅತ್ಯಂತ ಅದ್ಧೂರಿಯಾದ ವಿದ್ಯುತ್ ಅಲಂಕಾರವನ್ನು ಮೈಸೂರಿನಾದ್ಯಂತ ಮಾಡಲು ನಿರ್ಧರಿಸಲಾಗಿದೆ. ಒಟ್ಟು ನಗರದ ಒಳಗೆ 125 ಕಿ.ಮೀ ವಿದ್ಯುತ್ ಅಲಂಕಾರ ನಡೆಯಲಿದೆ. ಸ್ವಾತಂತ್ರ್ಯ ಹೋರಾಟಗಾರರು, ಮೈಸೂರು ಅರಸರು, ಪುನೀತ್ ರಾಜಕುಮಾರ್ ಸೇರಿದಂತೆ ಹಲವು ಗಣ್ಯರ ಭಾವಚಿತ್ರಗಳು ವಿದ್ಯುತ್ ಬಲ್ಭಗಳಲ್ಲಿ ಮೂಡಲಿವೆ. ಇದರಿಂದ ದಸರಾ ರಂಗು ಹೆಚ್ಚಾಗಲಿದೆ.