ಮಂಗಳೂರು: ಅರಬ್ಬಿ ಸಮುದ್ರದ ಮಧ್ಯ ಬೋಟ್ ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು, ಸಮುದ್ರದಲ್ಲಿ ಸಿಲುಕಿದ್ದ ತಮಿಳುನಾಡಿನ ೧೦ ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಿಸಿದೆ ಘಟನೆ ಇಂದು ನಡೆದಿದೆ.
ತಮಿಳುನಾಡು ಮೂಲದ ಲಾರ್ಡ್ ಆಫ್ ಓಶಿಯನ್ ಹೆಸರಿನ ಬೋಟ್ ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ್ದ ವೇಳೆ ಇತ್ತೀಚೆಗೆ ತೌಕ್ತೆ ಚಂಡಮಾರುತ ಎದುರಾಗಿತ್ತು. ಚಂಡಮಾರುತದಿAದ ತಪ್ಪಿಸಿಕೊಳ್ಳಲು ಬೋಟ್ ಮೇ ೧೪ರಂದು ಗುಜರಾತ್ ಕರಾವಳಿಯ ಪೋರ್ ಬಂದರಿಗೆ ತೆರಳಿತ್ತು. ಮೇ ೧೯ರ ವರೆಗೂ ಪೋರ್ ಬಂದರಿನಲ್ಲಿದ್ದ ಬೋಟ್ ಬಳಿಕ ಸಮುದ್ರ ಮೂಲಕ ಮತ್ತೆ ತಮಿಳುನಾಡಿನತ್ತ ಪಯಣ ಬೆಳೆಸಿತ್ತು.
ಈ ವೇಳೆ, ಮಂಗಳೂರಿನಿAದ ೨೦ ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಸಾಗುತ್ತಿದ್ದಾಗ ಬೋಟಿನ ಇಂಜಿನ್ ಕೆಟ್ಟು ಹೋಗಿದ್ದು ಕೋಸ್ಟ್ ಗಾರ್ಡ್ ಪಡೆಗೆ ಮಾಹಿತಿ ನೀಡಲಾಗಿತ್ತು. ಇಂಜಿನ್ ಚಾಲೂ ಆಗದ್ದರಿಂದ ಬೋಟನ್ನು ತಕ್ಷಣಕ್ಕೆ ರಿಪೇರಿ ಮಾಡುವುದಕ್ಕಾಗಿ ಕೋಸ್ಟ್ ಗಾರ್ಡ್ ಪಡೆಯವರು ಮಂಗಳೂರಿನ ಹಳೆ ಬಂದರಿನ ಅಲ್ ಬದ್ರಿಯಾ ಸಂಸ್ಥೆಗೆ ತಿಳಿಸಿದ್ದರು. ಬಳಿಕ ಐಸಿಜಿಎಸ್ ರಾಜದೂತ್ ಮತ್ತು ಅಲ್ ಬದ್ರಿಯಾ ಸಂಸ್ಥೆಯ ಸಿಬ್ಬಂದಿ ಸೇರಿ ಇಂಜಿನ್ ಕೆಟ್ಟಿದ್ದ ಬೋಟನ್ನು ಮಂಗಳೂರಿನ ಹಳೆ ಬಂದರಿಗೆ ಎಳೆದು ತಂದಿದ್ದಾರೆ. ಅದರಲ್ಲಿದ್ದ ಹತ್ತು ಮಂದಿ ಮೀನುಗಾರರನ್ನು ರಕ್ಷಣೆ ಮಾಡಿ, ತಾತ್ಕಾಲಿಕ ಆಶ್ರಯ ನೀಡಲಾಗಿದೆ