ಸಮಗ್ರ ಡಿಜಿಟಲ್ ಡೆಸ್ಕ್: ಮಕ್ಕಳು ತಮ್ಮ ಮನಸ್ಸಿನ ಭಾವನೆ ವ್ಯಕ್ತಪಡಿಸಲು ಹಿಂದೆ ಮುಂದೆ ಯೋಚಿಸುವುದಿಲ್ಲ. ಅದು ಕೋಪವಾದರೂ ಸರಿ, ಪ್ರೀತಿಯಾದರೂ ಸರಿ. ತಮ್ಮ ಭಾವನೆಯನ್ನು ಒಂದು ಚೂರೂ ಅಳುಕಿಲ್ಲದೆ ವ್ಯಕ್ತಪಡಿಸಿ ಬಿಡುತ್ತಾರೆ.
ಹಿಂದೆಲ್ಲಾ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಶಿಕ್ಷಕರು, ಹಿಡಿದು ಬಾರಿಸಿಬಿಡುತ್ತಿದ್ದರು. ಶಿಕ್ಷಕರ ಕೈಯಲ್ಲಿ ಯಾವಾಗಲೂ ಒಂದು ಬೆತ್ತ ಇದ್ದೇ ಇರುತ್ತಿತ್ತು. ಆ ಬೆತ್ತಕ್ಕೆ ಹೆದರಿಯೇ ವಿದ್ಯಾರ್ಥಿಗಳು ತೀಟೆ ಮಾಡುವ ಯೋಚನೆ ಕೂಡಾ ಮಾಡುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಶಿಕ್ಷಕರು ಮಕ್ಕಳ ಮೇಲೆ ಕೈ ಮಾಡುವಂತಿಲ್ಲ. ಏನಿದ್ದರೂ ಮಾತಿನಲ್ಲೇ ಮಕ್ಕಳನ್ನು ನಿಯಂತ್ರಿಸಬೇಕು. ಅಪ್ಪಿ ತಪ್ಪಿ ಟೀಚರ್ ಕೈ ಎತ್ತಿದರೆ ಮಾರನೇ ದಿನ ಶಾಲೆಯ ಮುಂದೆ ಪೋಷಕರ ದಂಡೇ ಸೇರುತ್ತದೆ. ಇದರ ಲಾಭವನ್ನು ಮಕ್ಕಳು ಬಹಳ ಚೆನ್ನಾಗಿ ತೆಗೆದುಕೊಳ್ಳುತ್ತಾರೆ.
ಇಲ್ಲಿ ಪುಟಾಣಿ ವಿದ್ಯಾರ್ಥಿ ಮತ್ತು ಶಿಕ್ಷಕಿಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ತಿಳಿಯುತ್ತದೆ ಮಗು, ತನ್ನ ಶಿಕ್ಷಕಿಯನ್ನು ಬಹಳವಾಗಿಯೇ ಸತಾಯಿಸಿದೆ ಎನ್ನುವುದು. ಆದರೆ ಯಾವಾಗ ಟೀಚರ್ ನಾನಿನ್ನು ನಿನ್ನ ಬಳಿ ಮಾತನಾಡುವುದಿಲ್ಲ, ನಿನ್ನಿಂದ ನನಗೆ ಬೇಜಾರಾಗಿದೆ ಎಂದು ಸಪ್ಪೆ ಮೋರೆ ಹಾಕಿ ಕೂರುತ್ತಾರೋ , ಮಗುವಿಗೆ ತಡೆಯಲಾಗುವುದಿಲ್ಲ. ಆ ಪುಟಾಣಿ ತನ್ನ ಟೀಚರ್ ಬಳಿ ಬಂದು ನಾನಿನ್ನು ಸುಮ್ಮನಿರುತ್ತೇನೆ, ತಪ್ಪನ್ನು ತಿದ್ದಿಕೊಳ್ಳುತ್ತೇನೆ ಎಂದು ಶಿಕ್ಷಕಿಯ ಮನವೊಲಿಸಲು ಪ್ರಯತ್ನಿಸುತ್ತದೆ. ಮಾತಿನ ಮಧ್ಯೆ ಪದೇ ಪದೇ ಶಿಕ್ಷಕಿಯನ್ನು ತಬ್ಬಿಕೊಳ್ಳುತ್ತದೆ. ಅಪ್ಪಿ ಮುತ್ತು ನೀಡುತ್ತದೆ.
ಕೋಪಗೊಂಡಂತೆ ವರ್ತಿಸುವ ಶಿಕ್ಷಕಿ ಕೂಡಾ ಮಗು ಅಪ್ಪಿ ಮುದ್ದಾಡುವಾಗ ಸಂಭ್ರಮಿಸುತ್ತಾರೆ. ಶಿಕ್ಷಕಿಯ ಸಂತೋಷ ಅವರ ಮುಗುಳ್ನಗೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಸಣ್ಣ ಮಕ್ಕಳಿಗೆ ಪಾಠ ಹೇಳಿಕೊಡುವುದು, ಬುದ್ದಿ ಕಲಿಸಿಕೊಡುವುದು ಬಹಳ ಕಷ್ಟದ ಕೆಲಸ. ಆದರೆ ಅದರಲ್ಲಿ ಸಿಗುವ ಖುಷಿ ಮಾತ್ರ ಬೆಲೆ ಕಟ್ಟಲಾಗದ್ದು.