ಸಮಗ್ರ ನ್ಯೂಸ್: ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ತನ್ನ ಅಡಿಕೆ ತೋಟದ ಆದಾಯದಿಂದ ಬಸ್ ಸೌಲಭ್ಯ ಗಳಿಸಿಕೊಂಡ ಅಪೂರ್ವ ಸಂಗತಿಯೊಂದು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಿಂದ ವರದಿಯಾಗಿದೆ.
112 ವರ್ಷಗಳ ಇತಿಹಾಸ ಇರುವ ವಿಟ್ಲದ ಮಿತ್ತೂರು ಸ. ಉನ್ನತೀಕರಿಸಿದ ಹಿ.ಪ್ರಾ ಶಾಲೆ ಸುಮಾರು 4 ಎಕರೆ ಜಮೀನು ಹೊಂದಿದೆ. ಎಸ್‌ಡಿಎಂಸಿಯವರು, ಶಿಕ್ಷಕರು ಹಾಗೂ ಗ್ರಾಮಸ್ಥರು ಸೇರಿ 2017ರಲ್ಲಿ ಇಲ್ಲಿ 628 ಅಡಿಕೆ ಸಸಿಗಳನ್ನು ನೆಟ್ಟು, ಬೆಳೆಸಿದ್ದಾರೆ.
ಈಗ ಅಡಿಕೆ ಇಳುವರಿ ಬರುತ್ತಿದೆ. ಈ ತೋಟದ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗಿದ್ದು, ಇದರಿಂದ ಶಾಲೆಗೆ ವಾರ್ಷಿಕ ₹2.50 ಲಕ್ಷ ಆದಾಯ ಲಭಿಸುತ್ತಿದೆ.
ಈ ಆದಾಯದಲ್ಲಿ 26 ಆಸನಗಳ ಬಸ್ ಖರೀದಿಸಲಾಗಿದ್ದು, ಮಕ್ಕಳನ್ನು ಶಾಲೆಗೆ ಕರೆತರಲು ಈ ಬಸ್ ಬಳಸಲಾಗುತ್ತಿದೆ. ಈ ತೋಟದ ಆದಾಯದಿಂದಲೇ ಬಸ್‌ನ ನಿರ್ವಹಣಾ ವೆಚ್ಚವನ್ನು ಎಸ್‌ಡಿಎಂಸಿ ಭರಿಸಲಿದೆ.
ಶಾಸಕ ಸಂಜೀವ ಮಠಂದೂರು ಅವರು ಈ ಬಸ್ ಸೇವೆಗೆ ಈಚೆಗೆ ಚಾಲನೆ ನೀಡಿ, ಗ್ರಾಮಸ್ಥರು, ಶಾಲೆಯ ಶಿಕ್ಷಕರು ಹಾಗೂ ಎಸ್‌ಡಿಎಂಸಿಯ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಗೆ ಕೊಠಡಿ ಮಂಜೂರು ಮಾಡಲಾಗಿದ್ದು ಹೆಚ್ಚುವರಿ ಒಂದು ಕೊಠಡಿ ಹಾಗೂ ಕಾಂಕ್ರೀಟ್ ರಸ್ತೆಯನ್ನು ಮುಂದಿನ ದಿನಗಳಲ್ಲಿ ಮಂಜೂರು ಮಾಡಲಾಗುವುದು ಎಂದರು.
ಇಡ್ಕಿದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಸುಧೀರ್ ಕುಮಾರ್ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಆದಂ ಎಂ.ಎಂ.ಎಸ್., ಉಪಾಧ್ಯಕ್ಷೆ ಮಲ್ಲಿಕಾ ತಾರನಾಥ, ಮುಖ್ಯ ಶಿಕ್ಷಕಿ ಸರೋಜಾ ಎ. ಇದ್ದರು.