ಸಮಗ್ರ ನ್ಯೂಸ್: ಯಾತ್ರಾಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಸುಬ್ರಹ್ಮಣ್ಯ- ಜಾಲ್ಸೂರು ಹೆದ್ದಾರಿಯ ಮರಕತ ಬಳಿ ಎರಡು ಜೋಡಿ ಮರಗಳು ಜೀವ ಬಲಿಗಾಗಿ ಕಾಯುತ್ತಿವೆ.
ಕಳೆದ ಬಾರಿ ಸಂಭವಿಸಿದ ಪ್ರಾಕೃತಿಕ ವಿಕೋಪ ಮತ್ತು ಜಲಸ್ಪೋಟದಿಂದ ಈ ಹೆದ್ದಾರಿಯ ನಡುಗಲ್ಲಿನಿಂದ ಕಲ್ಲಾಜೆವರೆಗೆ ಅಲ್ಲಲ್ಲಿ ಭೂಕುಸಿತ ಸಂಭವಿಸಿತ್ತು. ಗುಡ್ಡ ಕುಸಿದ ಪರಿಣಾಮ ಹಲವಾರು ಮರಗಳು ಧರಶಾಹಿಯಾಗಿದ್ದವು. ಇದರಲ್ಲಿ ಹಲವು ಮರಗಳು ಉರುಳಿದ್ದರೆ ಕೆಲವೊಂದು ಮರಗಳು ಅಲ್ಲೇ ಕುಸಿದು ಕುಳಿತಿವೆ.
ಹೀಗೆ ಉಂಟಾದ ವಿಕೋಪದಿಂದ ಎರಡು ಬೃಹತ್ ಮರಗಳು ಮರಕತ ಬಳಿ ರಸ್ತೆಗೆ ವಾಲಿ ನಿಂತಿದ್ದು ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿವೆ. ಪ್ರತಿನಿತ್ಯ ಯಾತ್ರಾರ್ಥಿಗಳು ಸೇರಿದಂತೆ ನೂರಾರು ವಾಹನಗಳು ಓಡಾಡುವ ಈ ಹೆದ್ದಾರಿಯಲ್ಲಿ ಈ ಅಪಾಯಕಾರಿ ಮರಗಳು ಜೀವಕ್ಕೆ ಕುತ್ತು ತರುವ ಸಾಧ್ಯತೆಗಳು ಹೆಚ್ಚು. ಶೇ.80ರಷ್ಟು ಕುಸಿತ ಕಂಡಿರುವ ಈ ಮರಗಳನ್ನು ತೆರವುಗೊಳಿಸದಿದ್ದರೆ ಮುಂದಾಗುವ ಅಪಾಯಗಳಿಗೆ ಬೆಲೆ ತೆರಬೇಕಾಗಬಹುದು.