ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಫೀಕ್ ಎಂಬಾತನ ಸಹೋದರನೊಬ್ಬ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಳ್ಳಾರೆ ನಿವಾಸಿ, ಇಬ್ರಾಹಿಂ ಎಂಬವರ ಪುತ್ರ ಸಫ್ರಿದ್ ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ಹಿಂದೂ ಸಂಘಟನೆಯೊಂದರ ಕಾರ್ಯಕರ್ತ ಹಾಗೂ ಬೆಳ್ಳಾರೆಯ ಅಮ್ಮು ರೈ ಕಾಂಪ್ಲೆಕ್ಸ್‌ನ ಮ್ಯಾನೇಜರ್ ಪ್ರಶಾಂತ್ ರೈ ಅವರಿಗೆ ಕೊಲೆ ಆರೋಪಿ ಶಫೀಕ್ ತಮ್ಮ ಸಫ್ರಿದ್ ಎಂಬಾತ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿತ್ತು.
ಆರೋಪಿ ಸಫ್ರಿದ್ ಕೊಲೆಯಾದ ಪ್ರವೀಣ್ ನೆಟ್ಟಾರು ಅವರ ಕೋಳಿ ಫಾರ್ಮ್ ನಲ್ಲಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಇಬ್ರಾಹಿಂ ಎಂಬವರ ಪುತ್ರನಾಗಿದ್ದು, ಶಫೀಕ್ ಸಹೋದರನಾಗಿದ್ದಾನೆ. ನಿನ್ನೆ ಸಂಜೆ ಪ್ರಶಾಂತ್ ರೈಯವರಿಗೆ ಕರೆ ಮಾಡಿರುವ ಸಫ್ರಿದ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೇ ಕೊಲೆ ಮಾಡುವುದಾಗಿ ಬೆದರಿಸಿದ್ದ ಎಂದು ಆರೋಪಿಸಲಾಗಿತ್ತು.
ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರಶಾಂತ್ ರೈ ಅವರಿಗೆ ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಬೆಳ್ಳಾರೆ ಪೋಲಿಸ್ ಠಾಣೆ ಮುಂದೆ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದರು.
ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಹಿಂದೂ ಸಂಘಟನೆಯ ಮುಖಂಡರು ಕೊಲೆ ಬೆದರಿಕೆ ಹಾಕಿರುವ ಸಫ್ರಿದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆತನನ್ನು 24 ಗಂಟೆಯೊಳಗೆ ಬಂಧಿಸಬೇಕು. ಇಲ್ಲದಿದ್ದರೆ ಬೆಳ್ಳಾರೆ ಬಂದ್ ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಕೂಡಲೇ ಬಂಧಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಗವಾನ್ ಸೋನಾವಣೆ ಅವರಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಇಂದು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಆರೋಪಿಯನ್ನು ಪೋಲಿಸರು ಬಂಧಿಸಿರುವುದಾಗಿ ಆಪ್ತ ಮೂಲದಿಂದ ತಿಳಿದುಬಂದಿದ್ದು, ಪೋಲಿಸರು ಅಧಿಕೃತ ಪ್ರಕಟಣೆ ನೀಡಬೇಕಿದೆ.