ಸಮಗ್ರ ನ್ಯೂಸ್: ಬ್ರಿಟನ್ ದೇಶವನ್ನು ಅತ್ಯಧಿಕ ಕಾಲ ಆಳಿದ ರಾಣಿ 2ನೇ ಎಲಿಜಬೆತ್ ಗುರುವಾರ ನಿಧನ ಹೊಂದಿದ್ದು, ಇದೀಗ ಎಲಿಜಬೆತ್ ಹಿರಿಯ ಪುತ್ರ ವೇಲ್ಸ್ ಮಾಜಿ ಯುವರಾಜ 3ನೇ ಚಾರ್ಲ್ಸ್ ಬ್ರಿಟನ್ ದೇಶಕ್ಕೆ ನೂತನ ರಾಜರಾಗಲಿದ್ದಾರೆ.
ಬ್ರಿಟನ್‌ನ ರಾಜ ಅಥವಾ ರಾಣಿ ಕಣ್ಮುಚ್ಚಿದ 24 ಗಂಟೆಯಲ್ಲಿ ಉತ್ತರಾಧಿಕಾರಿ ಹೆಸರು ಘೋಷಣೆ ಮಾಡಬೇಕಿದೆ.
ಈ ಹಿನ್ನೆಲೆ ರಾಜ ಚಾರ್ಲ್ಸ್, ರಾಣಿ ಕೆಮಿಲ್ಲಾ ಪಾರ್ಕರ್ ಇಂದು ಸ್ಕಾಟ್ಲೆಂಡ್‌ನಿಂದ ಲಂಡನ್ ತಲುಪಿದ್ದಾರೆ. ಚಾರ್ಲ್ಸ್ ಅವರು ಶನಿವಾರ ಬ್ರಿಟನ್‌ನ ಹೊಸ ರಾಜನೆಂದು ಅಧಿಕೃತವಾಗಿ ಘೋಷಣೆಯಾಗಲಿದ್ದಾರೆ.
ಹೊಸ ರಾಜನ ನೇಮಕಕ್ಕೆ ಬ್ರಿಟನ್‌ನ ಹಿರಿಯ ಮಂತ್ರಿಗಳು, ನ್ಯಾಯಮೂರ್ತಿಗಳು, ಧಾರ್ಮಿಕ ಮುಖಂಡರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ತುರ್ತು ಸಂಸತ್ ಅಧಿವೇಶನ ನಡೆಸಿ, ಹೊಸ ರಾಜನಿಗೆ ವಿಧೇಯತೆ ತೋರಿಸಿದ್ದಾರೆ.
ಬಳಿಕ ನೂತನ ರಾಜನ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಅನುವಂಶಿಕ ರಾಜಸತ್ತೆ ಕಾಯ್ದೆಯ ಅನುಸಾರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಚಾರ್ಲ್ಸ್ ಬ್ರಿಟನ್‌ನ ರಾಜನಾಗುವ ಮೂಲಕ 14 ಕಾಮನ್‌ವೆಲ್ತ್ ದೇಶಗಳ ಮುಖ್ಯಸ್ಥರಾಗಿ ವ್ಯವಹರಿಸಲಿದ್ದಾರೆ. ಹೊಸ ರಾಜನೆಂದು ಅಧಿಕೃತವಾಗಿ ಘೋಷಣೆಗೊಂಡರೂ ಅವರ ಪಟ್ಟಾಭಿಷೇಕಕ್ಕೆ ಇನ್ನೂ ಕೆಲ ತಿಂಗಳು ಹಿಡಿಯಲಿದೆ ಎಂದು ವರದಿಗಳು ತಿಳಿಸಿವೆ.