ಬೆಂಗಳೂರು: ದಾಖಲೆ ಇಲ್ಲದೆ ಹಣ ಇಟ್ಟುಕೊಂಡಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 76 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.
ಇದು ಹವಾಲ ಹಣವಿರಬಹುದೆಂದು ಶಂಕಿಸಲಾಗಿದ್ದು, ಪೊಲೀಸರು ಈ ಬಗ್ಗೆ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಗುಜರಾತ್ ಮೂಲದ ರಾಬಿನ್ ಕುಮಾರ್(26), ರಾಜಸ್ಥಾನದ ಸುಂದರ್‍ಲಾಲ್(39) ಮತ್ತು ಬೆಂಗಳೂರಿನ ಸುದಾಮ ನಗರದ ಸಿಕೆಸಿ ಗಾರ್ಡನ್ ನಿವಾಸಿ ನೀರಜ್ ಮಿಶ್ರಾ(37) ಬಂಧಿತರು.
ವಿಲ್ಸನ್‍ಗಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿ ನಗರದ ನಂಜಪ್ಪ ರಸ್ತೆ, ನಿರ್ಮಲ ಇಂಗ್ಲೀಷ್ ಶಾಲೆಯ ಹತ್ತಿರ ಮೂವರು ಹಣವನ್ನಿಟ್ಟುಕೊಂಡು ಒಬ್ಬರಿಗೊಬ್ಬರು ಸನ್ನೆ ಮುಖಾಂತರ ಮಾತನಾಡಿಕೊಂಡು ಯಾರನ್ನೂ ಕಾಯುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ತೆರಳಿ ಮೂವರನ್ನು ಬಂಧಿಸಿ ಅವರ ಬಳಿ ಇದ್ದ 76 ಲಕ್ಷ ರೂ. ಹಣ ಹಾಗೂ ಮೂರು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ವಿಲ್ಸನ್‍ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಸಿಸಿಬಿ ಸಂಘಟಿತ ಅಪರಾಧ ದಳ (ಪೂರ್ವ) ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೈಗೊಂಡಿದ್ದಾರೆ.