ಸಮಗ್ರ ನ್ಯೂಸ್: ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಪ್ರಶ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂವಿಧಾನದ 19ನೇ ವಿಧಿಯಡಿ ಉಡುಗೆ – ತೊಡುಗೆಯನ್ನು ಸಂಪೂರ್ಣ ಮೂಲಭೂತ ಹಕ್ಕು ಎಂದು ಹೇಳಿದರೆ, ಬಟ್ಟೆ ತೆಗೆಯುವುದು ಕೂಡ ಹಕ್ಕಾಗುವ ಅರ್ಹತೆ ಪಡೆಯುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಅರ್ಜಿದಾರರಿಗೆ ಹೇಳಿತು.
ಹೀಗೆ ಹೇಳುವ ಮೂಲಕ ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ಪೀಠ ಸಂವಿಧಾನದ 19ನೇ ವಿಧಿ ಪ್ರಕಾರ ಬಟ್ಟೆ ಧರಿಸುವ ಹಕ್ಕನ್ನು ತರ್ಕಬದ್ಧವಲ್ಲದ ವಿಪರೀತಗಳಿಗೆ ಕೊಂಡೊಯ್ಯಬಹುದೇ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ದೇವದತ್ ಕಾಮತ್ ಅವರನ್ನು ಪ್ರಶ್ನಿಸಿತು.
ಸಂವಿಧಾನದ 19(1) (ಎ) ಅಡಿಯಲ್ಲಿ ಉಡುಗೆ ತೊಡುಗೆಯ ಹಕ್ಕನ್ನು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ನ 2014ರಲ್ಲಿ ಎನ್ಎಎಲ್ಎಸ್ಎ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಕಾಮತ್ ಉಲ್ಲೇಖಿಸಿದ ನಂತರ ನ್ಯಾಯಾಲಯ ಹೀಗೆ ಹೇಳಿತು.
“ನಾವು ಇದನ್ನು ತರ್ಕಬದ್ಧವಲ್ಲದ ವಿಪರೀತಗಳಿಗೆ ಕೊಂಡೊಯ್ಯಲು ಸಾಧ್ಯವಿಲ್ಲ. ನೀವು ಬಟ್ಟೆ ಧರಿಸುವ ಹಕ್ಕು ಮೂಲಭೂತ ಹಕ್ಕು ಎಂದು ಹೇಳಿದರೆ ಬಟ್ಟೆ ಬಿಚ್ಚುವ ಹಕ್ಕು ಕೂಡ ಮೂಲಭೂತ ಹಕ್ಕಾಗುತ್ತದೆ” ಎಂದು ನ್ಯಾ. ಗುಪ್ತಾ ಹೇಳಿದರು.
ಆಗ ಕಾಮತ್ ಅವರು “ಕ್ಲೀಷೆಯ ವಾದಗಳನ್ನು ಮಂಡಿಸಲು ನಾನು ಇಲ್ಲಿ ನಿಂತಿಲ್ಲ. ಶಾಲೆಯಲ್ಲಿ ಯಾರೂ ಬಟ್ಟೆ ತೆಗೆಯುವುದಿಲ್ಲ. ನಾನು ಒಂದು ಅಂಶವನ್ನು ಸಾಭೀತುಪಡಿಸಲು ಹೇಳುತ್ತಿರುವೆ. “ಎಂದು ಪ್ರತಿಕ್ರಿಯಿಸಿದರು.
“ಬಟ್ಟೆ ಧರಿಸುವ ಹಕ್ಕನ್ನು ಯಾರೂ ನಿರಾಕರಿಸುತ್ತಿಲ್ಲ” ಎಂದು ನ್ಯಾ. ಗುಪ್ತಾ ಹೇಳಿದರು.”ಈ ಹೆಚ್ಚುವರಿ ಉಡುಪು (ಹಿಜಾಬ್) ಧರಿಸುವುದನ್ನು 19ನೇ ವಿಧಿಯ ಆಧಾರದ ಮೇಲೆ ನಿರ್ಬಂಧಿಸಬಹುದೇ” ಎಂದು ಕಾಮತ್ ಕೇಳಿದರು. ಹಿಜಾಬ್ ಯಾವುದೇ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿಸುವುದಿಲ್ಲ ಮತ್ತದು ಯಾವುದೇ ನೈತಿಕತೆಗೆ ವಿರುದ್ಧವಾಗಿಲ್ಲ ಎಂದು ಅವರು ಸಮರ್ಥಿಸಿಕೊಂಡರು. ಯಾರೂ ಹುಡುಗಿಯರು ಅದನ್ನು ಧರಿಸುವಂತೆ ಒತ್ತಾಯಿಸುವುದಿಲ್ಲ, ಆದರೆ ಅವರು ಅದನ್ನು ಧರಿಸಿದರೆ ಸರ್ಕಾರ ಇದನ್ನು ನಿಷೇಧಿಸಬಹುದೇ ಎಂದು ಕಾಮತ್ ಪ್ರಶ್ನಿಸಿದರು.
ಆಗ ನ್ಯಾ. ಗುಪ್ತಾ “ಯಾರೂ ಅವರಿಗೆ ಹಿಜಾಬ್ ಧರಿಸುವುದನ್ನು ನಿಷೇಧಿಸುತ್ತಿಲ್ಲ … ಆದರೆ ಶಾಲೆಯಲ್ಲಿ ಮಾತ್ರ” ಎಂದರು.
ಇಂದು(ಸೆ.8) ಬೆಳಗ್ಗೆ 11.30ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ.