ಸಮಗ್ರ ನ್ಯೂಸ್: ಜು 26 ರಂದು ರಾತ್ರಿ ಬೆಳ್ಳಾರೆಯಲ್ಲಿ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಯುವ ನೇತಾರ ಪ್ರವೀಣ್ ನೆಟ್ಟಾರ್ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳವು (NIA) ಚುರುಕುಗೊಳಿಸಿದೆ. ಸೆ 6 ರಂದು ರಾಜ್ಯದ ಮೂರು ಜಿಲ್ಲೆಗಳ 33 ಸ್ಥಳಗಳಲ್ಲಿ ಅದು ಶೋಧ ಕಾರ್ಯಚರಣೆ ನಡೆಸಿ ಹಲವು ಮಹತ್ವದ ದಾಖಲೆ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದಿದೆ.
ಹತ್ಯೆಯ ಕಾರಣ ಬಯಲು :
ಈ ಬಗೆಗಿನ ಮಾಹಿತಿಯನ್ನು ಎನ್ ಐಎಯು ಸೆ 6 ರಂದು ರಾತ್ರಿ ಹಂಚಿಕೊಂಡಿದೆ. ಈ ವೇಳೆ ಅದು ಹಲವು ಅಘಾತಕಾರಿ ವಿಷಯಗಳನ್ನು ಹೊರ ಹಾಕಿದೆ. ಕೃತ್ಯವನ್ನು ಎಸಗಿದ ಆರೋಪಿಗಳೆಲ್ಲರೂ ಪಾಪ್ಯುಲರ್ ಫ್ರಂಟ್ ಅಪ್ ಇಂಡಿಯಾ ಸಂಘಟನೆಯ ಸಕ್ರಿಯ ಕಾರ್ಯಕರ್ತರು ಎಂದು ತಿಳಿಸಿದೆ. ಸಮಾಜದ ಒಂದು ವರ್ಗದ ಜನರಲ್ಲಿ ಭಯವನ್ನು ಹುಟ್ಟಿಸುವ ಉದ್ದೇಶದಿಂದ ದೊಡ್ಡ ಷಡ್ಯಂತ್ರದ ಭಾಗವಾಗಿ ಈ ಹತ್ಯೆ ಮಾಡಲಾಗಿದೆ ಎಂಬ ಸ್ಪೋಟಕ ಮಾಹಿತಿಯನ್ನು ಇದು ಹೊರ ಹಾಕಿದೆ. ಆರೋಪಿಗಳು ಹಾಗೂ ಶಂಕಿತರ ಮನೆಯ ಶೋಧದ ವೇಳೆ ಮದ್ದುಗುಂಡುಗಳು, ಸುಧಾರಿತ ಶಸ್ತ್ರಗಳು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳವು ಕರ್ನಾಟಕ ರಾಜ್ಯದ ಮೂರು ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಸೆ.6 ರಂದು ಶೋಧ ಕಾರ್ಯಾಚರಣೆ ನಡೆಸಿತು. ಆರಂಭದಲ್ಲಿ ದಕ್ಷಿಣ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಜು.27 ರಂದು ಈ ಪ್ರಕರಣದ FIR ದಾಖಲು ಮಾಡಲಾಗಿತ್ತು. ಆ.4 ರಂದು ಮತ್ತೆ ಇದೇ ಪ್ರಕರಣವನ್ನು NIAಯು RC-36/2022/NIA/DLI ರಂತೆ ಮರು ದಾಖಲು ಮಾಡಿಕೊಂಡಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ NIA ಹಲವು ಆಯಾಮಗಳಲ್ಲಿ ತನಿಕೆ ನಡೆಸಿತ್ತು.
ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ. 6 ರಂದು ಮೈಸೂರು, ಕೊಡಗು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 33 ಸ್ಥಳಗಳಲ್ಲಿ NIAಯು ಶೋಧ ಕಾರ್ಯಚರಣೆ ನಡೆಸಿದೆ. ಕಾರ್ಯಚರಣೆಯನ್ನು, ಆರೋಪಿ ಗಳಿಗೆ ಹಾಗೂ ಶಂಕಿತರಿಗೆ ಸೇರಿದ ಸ್ಥಳಗಳಲ್ಲಿ ನಡೆಸಲಾಗಿತ್ತು. ಈ ವೇಳೆ ಡಿಜಿಟಲ್ ಸಾಧನಗಳು, ಬಳಸಿದ ಮದ್ದುಗುಂಡುಗಳು, ಸುಧಾರಿತ ಶಸ್ತ್ರಗಳು, ನಗದು, ಶಂಕಾಸ್ಪದ ದಾಖಲೆಗಳು, ಕರಪತ್ರಗಳು ಹಾಗೂ ಸಾಹಿತ್ಯಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆಯು ಮುಂದುವರಿದಿದೆ.