ಸಮಗ್ರ ನ್ಯೂಸ್: ಕಾರಿನ ಸೀಟ್ ಬೆಲ್ಟ್‌ಗಳ ಮಹತ್ವವನ್ನು ಎತ್ತಿ ತೋರಿಸಿದ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಕಾರಿನಲ್ಲಿ ಪ್ರಯಾಣಿಸುವ ಎಲ್ಲರೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಎಂದು ಮಂಗಳವಾರ ಹೇಳಿದ್ದಾರೆ.
ಕಾರ್ಯಕ್ರಮವೊಂದರ ವಿಡಿಯೋವನ್ನು ಹಂಚಿಕೊಂಡ ಕೇಂದ್ರ ಸಚಿವರು, ಸೀಟ್ ಬೆಲ್ಟ್ ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದ್ದಾರೆ. “ಕಾರಿನಲ್ಲಿ ಕುಳಿತುಕೊಳ್ಳುವ ಎಲ್ಲರೂ ಸೀಟ್ ಬೆಲ್ಟ್ ಧರಿಸುವುದನ್ನು ಈಗ ಕಡ್ಡಾಯಗೊಳಿಸಲಾಗುವುದು” ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟ್ವೀಟ್ ಮಾಡಿದ್ದಾರೆ.
ಮುಂಭಾಗದ ಸೀಟ್‌ಗಳ ಜೊತೆಗೆ ಹಿಂಭಾಗದ ಸೀಟುಗಳಲ್ಲಿ ಕುಳಿತಿರುವವರು ಸೀಟ್ ಬೆಲ್ಟ್ ಹಾಕದಿದ್ದರೆ ಸುರಕ್ಷತಾ ಬೀಪ್ ಬರುತ್ತದೆ ಎಂಬುದನ್ನು ವೀಡಿಯೋದಲ್ಲಿ ಹೈಲೈಟ್ ಮಾಡಿದ್ದಾರೆ.
ಖ್ಯಾತ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಭಾನುವಾರ ಸಂಜೆ ಮುಂಬೈ ಬಳಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಕಾರಿನ ಹಿಂಭಾಗದಲ್ಲಿ ಕುಳಿತಿದ್ದ ಸೈರ್ ಮಿಸ್ತ್ರಿ ಅವರು ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಈ ಟ್ವೀಟ್ ಮಾಡಿದ್ದಾರೆ.
ಸೀಟ್ ಬೆಲ್ಟ್ ಗಳು ಹೇಗೆ ಕೆಲಸಮಾಡ್ತವೆ?:
ಇದೊಂದು ಸರಳ ವಿಜ್ಞಾನ. ವಾಹನವೊಂದು 100 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದಾಗ ಅಪಘಾತವಾಗುತ್ತದೆ ಎಂದಿಟ್ಟುಕೊಳ್ಳೋಣ. ಆಗ ಹಿಂದಿನ ಸೀಟಿನಲ್ಲಿರುವ 80 ಕೆ.ಜಿ. ತೂಕದ ಪ್ರಯಾಣಿಕ ಸೀಟ್ ಬೆಲ್ಟ್ ಹಾಕಿರದಿದ್ದರೆ, 30,864 ಜೌಲ್ಗಳ ಅಗಾಧ ಬಲದಿಂದ ಗಾಯಗೊಳ್ಳುತ್ತಾನೆ. ಸೀಟ್ ಬೆಲ್ಟ್ ಹಾಕಿರದಿದ್ದರೆ ಮೂರು ರೀತಿಯ ಗಾಯಗಳಿಗೆ ಈಡಾಗುವ ಸಾಧ್ಯತೆಗಳಿರುತ್ತವೆ. ಮೊದಲನೆಯದ್ದು, ವೇಗವಾಗಿ ಚಲಿಸುತ್ತಿರುವಾಗ ಅಪಘಾತವಾದಲ್ಲಿ ಕಾರಿನ ಒಳಭಾಗ ಹಾಗೂ ದೇಹದ ನಡುವೆ ಘರ್ಷಣೆಯಾಗಿ ತೀವ್ರ ಪರಿಣಾಮ ಉಂಟು ಮಾಡುತ್ತದೆ. ಎರಡನೆಯದಾಗಿ, ಅಪಘಾತ ವಾದಾಗ ಕಾರಿನ ಒಳಗಿರುವ ಪ್ರಯಾಣಿಕರು ಪರಸ್ಪರ ಡಿಕ್ಕಿ ಹೊಡೆದು ದೈಹಿಕವಾಗಿ ಹೆಚ್ಚು ಹಾನಿಗೆ ಈಡಾಗುತ್ತಾರೆ. ಮೂರನೆಯದಾಗಿ, ಹಿಂಬದಿಯ ಸವಾರರು ಕಿಟಕಿಯಿಂದ ಹೊರಬಿದ್ದು ಗಾಯಗೊಳ್ಳುವ ಇಲ್ಲವೇ ಸಾವನ್ನಪುಪವ ಸಾಧ್ಯತೆಗಳಿರುತ್ತವೆ. ಸೀಟ್ ಬೆಲ್ಟ್ ಧರಿಸಿದ್ದರೆ ಇಂತಹ ಹಾನಿಗಳ ಸಂಭವನೀಯತೆ ಕಡಿಮೆಯಾಗುತ್ತದೆ.
ಕಾನೂನಿನ ಪ್ರಕಾರ ಕಡ್ಡಾಯ: ಕಾನೂನಿನ ಪ್ರಕಾರ, ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಕೇವಲ ತಮ್ಮ ಸುರಕ್ಷತೆಗಲ್ಲದೆ, ಸಹಪ್ರಯಾಣಿಕರ ಸುರಕ್ಷೆ ದೃಷ್ಟಿಯಿಂದಲೂ ಅಗತ್ಯ. ವಾಹನದಲ್ಲಿ ಯಾವುದೇ ಒಬ್ಬ ಸವಾರ ಸೀಟ್ ಬೆಲ್ಟ್ ಧರಿಸದಿದ್ದರೂ, ಅಪಘಾತ ಸಂಭವಿಸಿದರೆ ಈತ ಸೀಟ್ ಬೆಲ್ಟ್ ಧರಿಸಿದ ಉಳಿದ ಸವಾರರಿಗೆ ಡಿಕ್ಕಿ ಹೊಡೆದು ಅನಾಹುತಕ್ಕೆ ಕಾರಣವಾಗಬಹುದಾಗಿದೆ. 1989ರ ಕೇಂದ್ರೀಯ ಮೋಟಾರ್ ವಾಹನ ನಿಯಮ 138 (3) ಪ್ರಕಾರ, ಹಿಂಬದಿ ಸವಾರರು ಕೂಡ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ.ಸೀಟ್ ಬೆಲ್ಟ್ ಧರಿಸದಿದ್ದರೆ, 1988ರ ಮೋಟಾರ್ ವಾಹನ ಕಾಯ್ದೆ 194 ಬಿ (1) ಪ್ರಕಾರ 1,000 ರೂಪಾಯಿ ದಂಡ ವಿಧಿಸಬಹುದಾಗಿದೆ.